ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ 500 ರೂ ಮುಖಬೆಲೆಯ ರಾಶಿ ರಾಶಿ ನಕಲಿ ನೋಟುಗಳಿರುವ ಖಚಿತ ಮಾಹಿತಿ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ನಕಲಿ ನೋಟುಗಳು ಹಾಗೂ ಹಣ ಏಣಿಕೆ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆನ್ನಲಾಗಿದೆ.

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದಲ್ಲಿರುವ ನೂರಜಾನ್ ಜುಂಜುವಾಡ್ಕರ ಎಂಬವರ ಮನೆಯೊಂದರಲ್ಲಿ ಗೋವಾ ಮೂಲದವನು ಎನ್ನಲಾದ ಅರ್ಷದ್ ಖಾನ್ ಈತನು ಬಾಡಿಗೆದಾರನಾಗಿ ವಾಸ್ತವ್ಯವಿದ್ದನು. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ, ಮತ್ತು ಆ ಮನೆಯ ಹಿಂಬದಿಯ ಬಾಗಿಲನ್ನ ಸರಿಯಾಗಿ ಹಾಕದೇ ಇರುವುದನ್ನು ತಿಳಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ 500ರೂ ಮುಖಬೆಲೆಯ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಬರಹ ಇರುವ ಮತ್ತು ಗವರ್ನರ್ ಸಹಿ ಇಲ್ಲದೆ ಇರುವ ನೋಟಿಗೆ ಸಂಖ್ಯೆಯಿರುವ ಜಾಗದಲ್ಲಿ ಸೊನ್ನೆಯನಷ್ಟೇ ನಮೂದಿಸಿರುವ ಮತ್ತು ಮೂವಿ ಶೂಟಿಂಗ್ ಪರ್ಪಸ್ ಓನ್ಲಿ ಎಂದು ಬರೆದಿರುವ ಶೈನಿಂಗ್ ಪೇಪರಿನಲ್ಲಿ ಮುದ್ರಿತ 500 ಮುಖಬೆಲೆಯ ನಕಲಿ ಐವತ್ತು ನೋಟುಗಳ ಬಂಡಲ್ ನಂತೆ ಇಡಲಾಗಿದ್ದ ಅಂದಾಜು 14ಕೋಟಿ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನೂ ಈ ನಕಲಿ ನೋಟಿಗೆ ಸಂಬಂಧಪಟ್ಟ ಆ ಮನೆಯಲ್ಲಿ ಬಾಡಿಗೆದಾರನಾಗಿದ್ದ ಅರ್ಷದ್ ಖಾನ್ ಈತನನ್ನು ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರದಲ್ಲಿ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿರುವ ಈ ನಕಲಿ ನೋಟುಗಳನ್ನು ಯಾತಕ್ಕಾಗಿ ದಾಸ್ತಾನಿಡಲಾಗಿತ್ತು, ಯಾವ ಉದ್ದೇಶಕ್ಕಾಗಿ ಇದನ್ನು ಬಳಕೆ ಮಾಡಲು ಇಡಲಾಗಿತ್ತು, ಇದರ ಹಿಂದಿರುವ ಮರ್ಮವೇನು ಎನ್ನುವುದರ ಬಗ್ಗೆ ಪೊಲೀಸರ ಸಮಗ್ರ ತನಿಖೆಯಿಂದ ಹೊರಬರಬೇಕಾಗಿದೆ..

ಇದನ್ನೂ ಓದಿ