ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಬಹು ದಿನಗಳ ಆಗ್ರಹವಾಗಿರುವ ಶಿರಸಿಯಲ್ಲಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕಿದ್ದಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯ ಆಗಿದ್ದು, ಆ ಹಿನ್ನಲೆಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟವನ್ನು ಮತ್ತೆ ಶುರುಮಾಡಿ, ಜನರನ್ನು ಸಂಘಟಿಸಿ ಸರಕಾರದ ಗಮನ ಸೆಳೆಯುವ ಕೆಲಸವನ್ನು ಎಲ್ಲರ ಜೊತೆಗೂಡಿ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.

ಅವರು ಶಿರಸಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಶಿರಸಿಯಿಂದ ಕಾರವಾರಕ್ಕೆ, ಕುಮಟಾದಿಂದ ಭಟ್ಕಳಕ್ಕೆ ಜನರನ್ನು ಸಂಘಟಿಸಿ ಪಾದಯಾತ್ರೆ ಮಾಡಿದ್ದೇನೆ. ಜೊತೆಗೆ ಬೆಳಗಾವಿ ಅಧಿವೇಶನದಲ್ಲಿ ಸಚಿವರೊಡನೆ ವಿಷಯವನ್ನು ಪ್ರಸ್ತಾವನೆ ಇಟ್ಟಾಗ, ಈಗಾಗಲೇ ಜಿಲ್ಲೆಯ ಕಾರವಾರದಲ್ಲಿ ಒಂದು ಮೆಡಿಕಲ್ ಕಾಲೇಜು, ಆಸ್ಪತ್ರೆ ಇದೆ.

ಹಾಗಾಗಿ ಶಿರಸಿಗೆ ಇನ್ನೊಂದು ಮೆಡಿಕಲ್ ಕಾಲೇಜನ್ನು ಕೊಡುವುದು ಸಾಧ್ಯವಿಲ್ಲ. ನೀವು ಶಿರಸಿಯನ್ನೇ ಜಿಲ್ಲೆಯನ್ನಾಗಿಸಿದರೆ ಆಗ ಮೆಡಿಕಲ್ ಕಾಲೇಜು ನೀಡಬಹುದು ಎಂದಿದ್ದರು. ಉನ್ನತ ಸ್ತರದ ಸರಕಾರಿ ಅಧಿಕಾರಿಗಳೂ ಸಹ ಜಿಲ್ಲೆಗೆ ಒಂದೇ ಮೆಡಿಕಲ್ ಕಾಲೇಜು ಎನ್ನುತ್ತಾರೆ. ಹಾಗಾಗಿ ಶಿರಸಿಯಲ್ಲಿ ಮೆಡಿಕಲ್ ಕಾಲೇಜು ಆಗಬೇಕಾದರೆ ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಜನರಿಗಾಗಿ ಆಸ್ಪತ್ರೆ, ಮೆಡೆಕಲ್ ಕಾಲೇಜು ಮಾಡಿಸುವುದು ಶತಸಿದ್ಧ, ಹಾಗಾಗಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಕೈಗೆತ್ತಿಕೊಂಡಿದ್ದೇನೆ ಎಂದರು.

ಕಳೆದ 30 ವರ್ಷಗಳ ಹಿಂದೆಯೇ ವಕೀಲರಾಗಿದ್ದ ಎನ್.ಎಸ್. ಹೆಗಡೆ ಮಾಳೇನಳ್ಳಿ ಅವರು ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಆರಂಭಿಸಿದ್ದರು. ನಂತರದಲ್ಲಿ ಕಳೆದೊಂದು ದಶಕದಿಂದ ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಸಮಾನ ಮನಸ್ಕರು ಜೊತೆಗೂಡಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ನಡೆದಿತ್ತು. ಆದರೆ ಅಂತಿಮ ಹಂತದಲ್ಲಿ ಪ್ರಯತ್ನ ಕೈಗೂಡಲಿಲ್ಲ ಎಂಬುದಾಗಿ ಹಲವರ ಅಭಿಪ್ರಾಯವಾಗಿದೆ.

ಹಾಗಾಗಿ ಈ ಹಿಂದೆ ಹೋರಾಡಿದ ಎಲ್ಲರ ಸಹಕಾರ, ಮಾರ್ಗದರ್ಶನ ಹಾಗು ಮುಂದೆ ಜೊತೆಯಾಗುವವರ ಬೆಂಬಲದೊಂದಿಗೆ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟವನ್ನು ಸಂಘಟಿಸಲಾಗುವುದು. ಅಂದಿನ‌ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಹುತೇಕರು ಇಂದು ನಮ್ಮೊಡನೆ ಕೈಜೊಡಿಸಿದ್ದಾರೆ. ಉಳಿದವರೂ ಜೊತೆಯಾಗುವ ಭರವಸೆ ನೀಡಿದ್ದಾರೆ. ಎಲ್ಲರೂ ಜೊತೆಗೂಡಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟವನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ಈ ಮೊದಲಿನ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಎಂ.ಎಂ. ಭಟ್ಟ ಕಾರೇಕೊಪ್ಪ ಮಾತನಾಡಿ, ಅಂದು ಎಲ್ಲರ ಸಹಕಾರದಿಂದ ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ನಡೆಸಲಾಗಿತ್ತು. ಆದರೆ ಆ ಪ್ರಯತ್ನ ಕೈಗೂಡಲಿಲ್ಲ. ಇದೀಗ ಮತ್ತೆ ಅನಂತಮೂರ್ತಿ ಅವರ ನೇತೃತ್ವದಲ್ಲಿ ಹೋರಾಟವನ್ನು ಸಂಘಟಿಸಿ, ಎಲ್ಲ ತಾಲೂಕಿನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆ ಹೋರಾಟವನ್ನು ಆರಂಭಿಸಲಾಗುವುದು ಎಂದರು.

ಸಿದ್ದಾಪುರದ ಸಿ.ಎಸ್. ಗೌಡರ್ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ನಮ್ಮ ಸಿದ್ಧಾಪುರ ಭಾಗದ ಸಮಸ್ತರ ಬೆಂಬಲವಿದ್ದು, ನಾವೆಲ್ಲ ಸಮಾನ ಮನಸ್ಕರು ಹೋರಾಟಕ್ಕೆ ಸದಾ ಸಿದ್ಧರಿದ್ದೇವೆ. ಈ ಬಾರಿ ಪ್ರತ್ಯೇಕ ಜಿಲ್ಲೆ ಆಗುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದರು.

ಜಿ.ಪಂ ಮಾಜಿ‌ ಸದಸ್ಯೆ ಶೋಭಾ ನಾಯ್ಕ, ನಿವೃತ್ತ ಇಂಜಿನಿಯರ್ ವಿ.ಎಂ. ಭಟ್ಟ, ಶಿರಸಿ ನಗರ ಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿದರು.ಸಾಮಾಜಿಕ ಕಾರ್ಯಕರ್ತ ಎಸ್.ಎನ್ ಹೆಗಡೆ ದೊಡ್ನಳ್ಳಿ, ಸದಾನಂದ ದೇಶಳ್ಳಿ, ಮುಂಡಗೋಡಿನ ಚಿದಾನಂದ ಹರಿಜನ, ದೀಪಕ್ ಕಾನಡೆ, ಸಂತೋಷ ನಾಯ್ಕ ಬ್ಯಾಗದ್ದೆ ಸೇರಿದಂತೆ ಇನ್ನಿತರರು ಇದ್ದರು.

ಎಲ್ಲರ ವಿಶ್ವಾಸದಿಂದ, ಸಹಕಾರದಿಂದ ಹೋರಾಟ ಮತ್ತೆ ಶುರು
ಶಿರಸಿ ಪ್ರತ್ಯೇಕ ಜಿಲ್ಲೆಯಾಗುವ ನಿಟ್ಟಿನಲ್ಲಿ ಈಗಾಗಲೇ ಉಪೇಂದ್ರ ಪೈ ಜೊತೆಗೂಡಿ ಹಲವರು ಹೋರಾಟಕ್ಕೆ ಧುಮುಕಿದ್ದರು. ಆದರೆ ಆ ಪ್ರಯತ್ನ ಕೈಗೂಡಲಿಲ್ಲ. ಹಾಗಾಗಿ ಇದೀಗ ಅವರೆಲ್ಲರ ಸಹಕಾರ, ಮಾರ್ಗದರ್ಶನ ಪಡೆದು ಎಲ್ಲರನ್ನೂ ಒಗ್ಗೂಡಿಸಿಕೊಂಡು, ಘಟ್ಟದ ಮೇಲಿನ ಎಲ್ಲ ತಾಲೂಕಿನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತ್ಯೇಕ ಶಿರಸಿ ಜಿಲ್ಲೆ ಹೋರಾಟ ಸಂಘಟಿಸಲಾಗುವುದು ಎಂದು ಅನಂತಮೂರ್ತಿ ಹೇಳಿದರು.

ಗಮನಿಸಿ