ಸುದ್ದಿಬಿಂದು ಬ್ಯೂರೋ
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನ ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ಶಾಸಕ ಸತೀಶ ಸೈಲ್ ಅವರ ಪ್ರಯತ್ನದಿಂದಾಗಿ ಶೋಧ ಕಾರ್ಯಾಚರಣೆ ನಡೆಸಲು ಗೋವಾದಿಂದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಆಗಮಿಸಿದ್ದು, ಸದ್ಯ ಕಾರವಾರದ ಬಂದರಿನಲ್ಲಿ ಲಂಗರು ಹಾಕಿದೆ.

ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತದಿಂದ 11 ಜನರು ಸಾವಿಗೀಡಾಗಿದ್ದು, 8 ಮಂದಿಯ ಮೃತದೇಹ ಮಾತ್ರ ದೊರಕಿತ್ತು. ಇನ್ನೂ ಮೂವರ ಮೃತದೇಹಕ್ಕಾಗಿ ಸಾಕಷ್ಟು ಶೋಧ ನಡೆಸಿದ್ರೂ ಯಾವುದೇ ಫಲ ದೊರಕಿರಲಿಲ್ಲ. ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ದೊರಕಿರಲಿಲ್ಲ. ಗಂಗಾವಳಿ ನದಿ ಹಾಗೂ ನದಿ ದಡದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಅಲ್ಲದೇ, ಮೃತ ಅರ್ಜುನ್ ಅವರ ಲಾರಿ ಕೂಡಾ ಗಂಗಾವಳಿ ನದಿಯಲ್ಲಿ ಮುಳುಗಿತ್ತು.

ಉಡುಪಿಯ ಈಶ್ವರ ಮಲ್ಪೆ ತಂಡ ಶೋಧ ಕಾರ್ಯಾಚರಣೆ ನಡೆಸಿದಾಗ ಲಾರಿ ಹಾಗೂ ಟ್ಯಾಂಕರ್‌ನ ಅವಶೇಷ ಮಾತ್ರ ಸಿಕ್ಕಿತ್ತು. ಈ ಹಿಂದೆ ಡ್ರೆಜ್ಜಿಂಗ್ ಮಷಿನ್ ತರಿಸಿ ಕಾರ್ಯಾಚರಣೆ ನಡೆಸಲು ಒತ್ತಾಯ ಕೇಳಿಬಂದಿತ್ತು. ಸದ್ಯ ಕೊನೆಗೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಪ್ರಯತ್ನದ ಫಲವಾಗಿ ಡ್ರೆಜ್ಜಿಂಗ್ ಮಷಿನ್ ಆಗಮಿಸಿದೆ. ಆದರೆ, ಕಾರ್ಯಾಚರಣೆ ಗಾಳಿ ಹಾಗೂ ಸಮುದ್ರದ ಭರತ- ಇಳಿತ ಅಡ್ಡಿಯಾಗುತ್ತಿದ್ದು, ಗಂಗಾವಳಿ ಅಳಿವೆ ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಷಿನ್ ಪ್ರವೇಶ ಆಗ್ಬೇಕಂದ್ರೆ ಸಮುದ್ರ ಭರತದ ಅಗತ್ಯವಿದೆ. ಸಮುದ್ರ ಭರತದ ಜತೆಯೇ ಅಳಿವೆಯಿಂದ ನದಿಗೆ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಪ್ರವೇಶ ಮಾಡಲಿದೆ.

ಇಲ್ಲದಿದ್ರೆ ಹೂಳಿನಲ್ಲೇ ಮಶೀನ್ ಸಿಲುಕಿಕೊಳ್ಳುವ ಭೀತಿ ಇದೆ. ಗಂಗಾವಳಿ ನದಿಯ ಸೇತುವೆಯಡಿ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಫುಲ್ ಸೆಟ್ ಅಪ್ ಜತೆ ದಾಟಲು ಕೂಡಾ ಅಸಾಧ್ಯವಿದ್ದು, ಈ ಹಿನ್ನೆಲೆ ಬಾರ್ಜ್ ಮೇಲೆ ಡ್ರೆಜ್ಜಿಂಗ್ ಮಷಿನರಿಗಳನ್ನು ಬಿಡಿಸಿಟ್ಟೇ ದಾಟಿಸುವ ಕೆಲಸ ಮಾಡಲಾಗುತ್ತದೆ. ಗುರುವಾರ ಶಿರೂರಿಗೆ ಡ್ರೆಜ್ಜಿಂಗ್ ಮಷಿನ್ ತಲುಪಿದ್ರೂ ಕಾರ್ಯಾಚರಣೆ ಸಂಜೆಯಿಂದ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಗಮನಿಸಿ