suddibindu.in
ಕಾರವಾರ: ಕಾಂಗ್ರೆಸ್ ಇರಲಿ, ಬಿಜೆಪಿಯೇ ಆಗಿರಲಿ; ಯಾವತ್ತೂ ಯಾರ ವಾಸ ಸ್ಥಳಗಳನ್ನ ಖಾಲಿ ಮಾಡಲು ಅವಕಾಶ ಕೊಡುವುದಿಲ್ಲ. ನಿಮ್ಮ ಜೊತೆ ಎಂದಿಗೂ ನಾನಿದ್ದೇನೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಬೈತಖೋಲ್ ಮೀನುಗಾರರಿಗೆ ಅಭಯ ನೀಡಿದ್ದಾರೆ
.

ಬೈತಖೋಲ್‌ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೀನುಗಾರರನ್ನ ಒಕ್ಕಲೆಬ್ಬಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈ‌ ಬಗ್ಗೆ ಶಾಸಕ ಸತೀಶ್ ಸೈಲ್ ಅವರೊಂದಿಗೆ ಚರ್ಚಿಸುತ್ತೇನೆ. ನಾವಿಬ್ನರೂ ಯಾವತ್ತೂ ನಿಮ್ಮ ಜೊತೆ ಇದ್ದೇವೆ. ಏನೇ ಸಮಸ್ಯೆಯಾದರೂ ನಮ್ಮನ್ನ ಕರೆಯಿರಿ. ಅಂಥ ಪರಿಸ್ಥಿರಿ ಎದುರಾದರೆ ಇಬ್ಬರೂ ರಸ್ತೆಗಿಳಿದು ಹೋರಾಡುತ್ತೇವೆ. ಇದು ಚುನಾವಣಾ ಗಿಮಿಕ್ ಅಲ್ಲ ಎಂದರು.

ಕಾಂಗ್ರೆಸ್ಸಿಗರು ಕೊಟ್ಟ ಮಾತಿನ ಮೇಲೆ ನಿಲ್ಲುತ್ತೇವೆ, ನುಡಿದಂತೆ ನಡೆಯುತ್ತೇವೆ. ಸೀಬರ್ಡ್ ಯೋಜನೆಯಿಂದ ಸ್ಥಳೀಯರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಂಸತ್‌ನಲ್ಲಿ ಮಾತನಾಡುವೆ. ಕಾಂಗ್ರೆಸ್ ಕೈಗೆ ನಿಮ್ಮ ಕೈ ಜೋಡಿಸಿ ಶಕ್ತಿ ನೀಡಿದರೆ ದೆಹಲಿಯಲ್ಲಿ ನಿಮ್ಮ ಧ್ವನಿಯಾಗುವೆ ಎಂದರು.

ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಮೀನುಗಾರರನ್ನ ಒಕ್ಕಲೆಬ್ಬಿಸುವ ಯತ್ನ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದಕ್ಕಾಗಿ ರಾಜಕೀಯ ಪ್ರೇರಿತ‌ ಹುನ್ನಾರ ನಡೆಯುತ್ತಿದೆ. ಕಡಲತೀರಗಳು ಅದಾನಿ- ಅಂಬಾನಿಗೆ ಮಾರಾಟವಾಗುತ್ತಿವೆ. ಅದಕ್ಕೆ ಅವಕಾಶ ಕೊಡಬೇಡಿ. ಮನೆಯ ಮಗಳಂತೆ ನಿಮ್ಮನ್ನು ನಮ್ಮ ಜನ ನೋಡುತ್ತಿದ್ದಾರೆ. ಮೀನುಗಾರ ಕುಟುಂಬಕ್ಕೆ ನ್ಯಾಯ ಒದಗಿಸುತ್ತೀರಿ ಎಂದು ಭಾವಿಸಿದ್ದಾರೆ. ಒಕ್ಕಲೆಬ್ಬಿಸಲು ಅವಕಾಶ ಕೊಡಬೇಡಿ ಎಂದು ಡಾ.ಅಂಜಲಿ ಅವರಿಗೆ ಮನವಿ ಮಾಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷೆ ಛಾಯಾ ಜಾವ್ಕರ್- ಈ‌ ಊರನ್ನ ರಕ್ಷಣೆ ಮಾಡಬೇಕು. ಕಡಲನ್ನ ನಂಬಿರುವ ಕಡಲಮಕ್ಕಳಿಗೆ ಅನ್ಯಾಯವಾಗಲು ಬಿಡಬಾರದು ಎಂದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕಾದದ್ದು ನಮ್ಮ ಕರ್ತವ್ಯ. ಇದರಲ್ಲಿ ನಮ್ಮ ಸ್ವಾರ್ಥವೂ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತೂವರೆ ಸಾವಿರ ಮಹಿಳೆಯರಿಗೆ ಬರುತ್ತದೆ. ಆದರೆ ಹೂವು ಇವತ್ತು ಚೆನ್ನಾಗಿರತ್ತೆ, ನಾಳೆ ಬಾಡಿ ಹೋಗುತ್ತದೆ. ಅದಾನಿ- ಅಂಬಾನಿಯ ಯೋಜನೆಗೆ ನಮ್ಮ ವಿರೋಧವಿದೆ. ನಾವು ಇಲ್ಲಿನ ಜನರ ಪರವಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಡಿಸಿಸಿ ಉಪಾಧ್ಯಕ್ಷ ಶಂಭು ಶೆಟ್ಟಿ, ನಗರಸಭಾ ಸದಸ್ಯರಾದ ರಾಜೇಶ್ ಮಾಜಾಳಿಕರ್, ಪ್ರಶಾಂತ್ ಹರಿಕಂತ್ರ, ಮೀನುಗಾರ ಮುಖಂಡರಾದ ದುಳಿಯಾ ದುರ್ಗೆಕರ್, ಶ್ರೀಧರ್ ಹರಿಕಂತ್ರ, ಗೌರೀಶ್ ಹರಿಕಂತ್ರ, ಲಿಯೋ ಲೂಹಿಸ್, ವಿಲ್ಸನ್ ಫರ್ನಾಂಡೀಸ್, ಜಿ‌ಪಿ.ನಾಯ್ಕ, ರಾಜು ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.