ಸುದ್ದಿಬಿಂದು ಬ್ಯೂರೋ
ಕುಮಟಾ : ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ, ಕಳೆದ ಹಲವಾರು ವರ್ಷಗಳಿಂದ ಕುಮಟಾ ತಾಲೂಕಿನ ಮೂರೂರಿನಲ್ಲಿ ಓಸಿ, ಮಟ್ಕಾ ಹಾವಳಿ ಮೀತಿ ಮೀರಿದ್ದು ಸ್ಥಳೀಯರು ರೋಸಿ ಹೋಗಿದ್ದಾರೆ.

ಮೂರೂರು ಗ್ರಾಮದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಮರೆಯಲ್ಲಿ ನಿಂತು ದಿನವೊಂದಕ್ಕೆ 50 ಸಾವಿರಕ್ಕೂ ಹೆಚ್ಚಿನ ಹಣವನ್ನು ಸಾರ್ವಜನಿಕರಿಂದ ಓಸಿ, ಮಟ್ಕಾ ರೂಪದಲ್ಲಿ ಯಾಮಾರಿಸುತ್ತಿದ್ದಾನೆ. ಈ ದಂಧೆಯಿಂದ ಸಾರ್ವಜನಿಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಹಲವು ಘಟನೆಗಳಿದೆ.ಈ ಭಾಗದಲ್ಲಿ ಬಡವರೇ ಹೆಚ್ಚಿದ್ದು, ಓಸಿ, ಮಟ್ಕಾ ದಂಧೆಗೆ ಬಲಿಯಾದವರು ಬಡವರೇ ಆಗಿದ್ದಾರೆ.

ಇದನ್ನೂ ಓದಿ:-ವಂದೇ ಭಾರತ್ ರೈಲ್ವೆಗೆ ಸ್ವಾಗತ

ಕೂಲಿ ಕೆಲಸ ಮಾಡುವ,ಮೀನು ಮಾರಾಟ ಮಾಡುವ, ಅಂಗಡಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವವರೇ ಈ ದಂಧೆಗೆ ಬಲಿಯಾಗಿದ್ದಾರೆ.ಈತನ ಉಪಟಳಕ್ಕೆ ಸಾರ್ವಜನಿಕರು ಆಕ್ರೋಶಿತರಾಗಿ ಹಲವಾರು ಬಾರಿ ಗ್ರಾಮ ಪಂಚಾಯತಕ್ಕೆ ದೂರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ.ಕಾರಣ ಈತ ಯಾವುದೇ ವಿಷಯದಲ್ಲೂ ತನಗೆ ಜನಪತ್ರಿನಿಧಿ ಬೆಂಬಲವಿದೆ ಎಂದು ಜನರನ್ನೇ ಯಾಮಾರಿಸಿಕೊಂಡು ಮಟ್ಕಾ ದಂಧೆ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ ಎನ್ನಲಾಗುತ್ತಿದೆ. ವಿಚಿತ್ರವೆಂದರೆ ಈತ ಓಸಿ, ಮಟ್ಕಾ ಲಿಸ್ಟನ್ನು ತನ್ನಲ್ಲಿಯೇ ಇಟ್ಟುಕೊಂಡು ಹಣ (ಬುಕ್ಕಿ) ವಿನಿಮಯ ಮಾಡುತ್ತಿದ್ದಾನೆ.


ಪೊಲೀಸರೇ ಮೌನ
ಈತ ಮೂರೂರು ಸುತ್ತಮುತ್ತಲಿನ ಜಾಗ ಅಥವಾ ಬಸ್ ನಿಲ್ದಾಣದಲ್ಲಿ ಕುಳಿತು ದಂಧೆ ನಡೆಸುತ್ತಿದ್ದಾನೆ.ಈ ವಿಷಯ ಪೊಲೀಸ್ ಇಲಾಖೆಗೆ ಗೊತ್ತಿದ್ದೂ ಗೊತ್ತಿಲ್ಲದವರಂತೆ ಮೌನವಾಗಿ ಉಳಿದುಕೊಳ್ಳುತ್ತಿವುದು ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕರು ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಮೂರೂರಿನಲ್ಲಿರುವ ಪ್ರತೀ ಪೆಟ್ಟಿಗೆ ಅಂಗಡಿಯಲ್ಲೂ ಓಸಿ, ಮಟ್ಕಾ ಹಾವಳಿ ಜೋರಾಗಿಯೇ ನಡೆಯುತ್ತಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಮೌನ ಮುರಿದು ಇತ್ತ ಗಮನಹರಿಸಿ ಬಡವರ ನೋವಿಗೆ ಸ್ಪಂದಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.