ಸುದ್ದಿಬಿಂದು ಬ್ಯೂರೋ
ಬೆಂಗಳೂರು :ಐವತ್ತು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಪಾರವಾದ ಸೇವೆ ಸಲ್ಲಿಸಿದ ಕನ್ನಡ ಚಲನಚಿತ್ರ ರಂಗದ ಹಿರಿಯ ಕೊಂಡಿಯಂತಿದ್ದ ಪ್ರಖ್ಯಾತ ನಟಿ ಲೀಲಾವತಿ(Lilavati)ಇಂದು ವಿಧಿವಶರಾಗಿದ್ದಾರೆ..

ಲೀಲಾವತಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದ ನಟರ ಜೊತೆ ಅಭಿನಯಿಸಿದ್ದರು.
ಲೀಲಾವತಿಯವರ ಮೂಲ ಹೆಸರು ಲೀಲಾ ಕಿರಣ್ ಮೈಸೂರಿನ ರಂಗಭೂಮಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಲೀಲಾವತಿಯವರು 1938ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ನಾಟಕ,ರಂಗಭೂಮಿ ಬಗ್ಗೆ ಚಿಕ್ಕಂದಿನಿಂದಲೆ ಆಸಕ್ತಿ ಹೊಂದಿದ್ದರು. ಇವರು ಕಲಾ ಜೀವನದ ಜೊತೆಗೆ ಸಾಮಾಜಿಕ ಸೇವೆ ಮಾಡಿಕೊಂಡು ಬಂದಿದ್ದರು.ಇವರು ಮನಮೆಚ್ಚಿದ ಮಡದಿ,ಭಕ್ತ ಕುಂಬಾರ, ಗಾಳಿಗೋಪುರ, ಕನ್ಯಾರತ್ನ, ಗೆಜ್ಜೆಪೂಜೆ,ಸೀಪಾಯಿ ರಾಮು ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದರು.
ಲೀಲಾವತಿ ಅವರ ನಿಧನಕ್ಕೆ ಅಭಿಮಾನಿಗಳು, ನಟ ನಟಿಯರು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಪುತ್ರ ವಿನೋದ ರಾಜ ಜೊತೆ ಕೃಷಿ ಕಾಯಕದಲ್ಲಿ ತೊಡಗಿದ್ದ ಲೀಲಾವತಿ ಅವರು, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿಗಷ್ಟೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಲೀಲಾವತಿಯವರ ಹೆಸರಲ್ಲಿ ಪಶು ಆಸ್ಪತ್ರೆಯನ್ನ ಉದ್ಘಾಟನೆ ಮಾಡಿದ್ದರು. ನಾಳೆ ಸಂಜೆ 5ಗಂಟೆಗೆ ನೆಲಮಂಗಲದ ಸೋಲದೇವನ ಹಳ್ಳಿ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.