ಸುದ್ದಿಬಿಂದು ಬ್ಯೂರೋ

ಕುಮಟಾ :ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನೋ ಗಾದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಹಶೀಲ್ದಾರ್ ಕಚೇರಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಹಣ ಕೊಟ್ಟರೆ ಯಾರದೋ ಆಸ್ತಿ ಮತ್ಯಾರಿಗೋ ವರ್ಗಾವಣೆ ಮಾಡಲಾಗುತ್ತದೆ. ಕೆಲ ಸರ್ಕಾರಿ ಕಚೇರಿಗಳಲ್ಲಿ ಮೇಲಾಧಿಕಾರಿಗಳ ಆಟ ಜೋರಾದರೆ ಕುಮಟಾ ತಹಶೀಲ್ದಾರ್ ಕಚೇರಿಯಲ್ಲಿ ಕೆಳ ಮಟ್ಟದ ಕೆಲ ನೌಕರರ ಭ್ರಷ್ಟಾಚಾರ ಮಿತಿ ಮೀರುತ್ತಿದೆ ಎಂಬ ಮಾತು ತಾಲೂಕಿನಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಇದು ಎಲ್ಲಿಯವರೆಗೆ ಎಂದರೆ ನೌಕರರು ಮಾಡಿದ ಉದ್ದೇಶಪೂರ್ವಕ ತಪ್ಪಿನಿಂದಾಗಿ ಮೇಲಾಧಿಕಾರಿಗಳ ತಲೆ ದಂಡವಾಗುವ ಹಂತಕ್ಕೆ ಬಂದು ನಿಂತಿದೆ.

ಇಲ್ಲಿ ತಹಶೀಲ್ದಾರ್ ಎಂಬ ಅಧಿಕಾರಿ ಇದ್ದರೂ ಕೂಡ ಅವರ ಗಮನಕ್ಕೆ ತರದೆ ಅವರ ಕೆಳಗಿನ ನೌಕರರೇ ದುಡ್ಡಿಗಾಗಿ ನ್ಯಾಯಾಧೀಶರ ಹುದ್ದೆಗೆ ಏರಿ ಬಿಡುತ್ತಾರೆ. ತಾವು ಮಾಡಿದ ತಪ್ಪು ಅಕಸ್ಮಾತ್ ತನಿಖೆಗೆ ಬಂದರೆ ಆ ಪ್ರಕರಣವನ್ನು ಮೇಲಾಧಿಕಾರಿಗ ತಲೆಗೆ ಕಟ್ಟಿ (ತಹಶೀಲ್ದಾರ) ತಾವು ಬಚಾವ್ ಆಗುತ್ತಾರೆ.
ಆಸ್ತಿ ಹಂಚಿಕೆ ಬಗ್ಗೆ ಕಚೇರಿಗೆ ತಕರಾರು ಅರ್ಜಿ ಸಲ್ಲಿಕೆ ಆಗಿದ್ದರೂ ಕೂಡ ಲಂಚ ಎಂಬ ಹೇಸಿಗೆ ತಿನ್ನುವುದಕ್ಕಾಗಿ ಆ ಅರ್ಜಿಯನ್ನೇ ನಾಪತ್ತೆ ಮಾಡಿ ಹಿರಿಯ ಅಧಿಕಾರಿಗಳ ದಾರಿ ತಪ್ಪಿಸಿ ಸುಲಭವಾಗಿ ಆಸ್ತಿ ವರ್ಗಾವಣೆ ಮಾಡುತ್ತಾರೆ. ತಕರಾರು ಇರುವಾಗಲೂ ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡದೆ ಆಸ್ತಿ ವರ್ಗಾವಣೆ ಮಾಡಿ ಬಿಡುತ್ತಾರೆ!

ಈ ವರ್ಗಾವಣೆ ವಿಚಾರ ತಕರಾರು ಅರ್ಜಿ ಸಲ್ಲಿಸಿರುವವರಿಗೆ ಗೊತ್ತಾಗುವ ಮೊದಲೇ ಎಲ್ಲವೂ ಗಪ್ ಚುಪ್ ನಡೆದು ಹೋಗುತ್ತದೆ. ದೂರುದಾರ ಬಂದು ಕೇಳಿದರೆ ನಿಮ್ಮ ತಕಾರರು ಅರ್ಜಿಯೇ ನಮ್ಮ ಟೇಬಲಿಗೆ ಬಂದಿಲ್ಲ ಎನ್ನುತ್ತ ನಯವಾಗಿ ಜಾರಿಕೊಳ್ಳುತ್ತಾರೆ. ಕುಮಟಾ ತಹಶೀಲ್ದಾರ ಕಚೇರಿಯಲ್ಲಿ ಸ್ವಾತಿ ಮುತ್ತಿನ ಭ್ರಷ್ಟಾಚಾರದ ಮಳೆ ಹನಿ ಜೋರಾಗಿ ಸುರಿಯುತ್ತಿದ್ದು, ಮುಂದೆ ಇದು ತಹಶೀಲ್ದಾರ ಕಚೇರಿಯನ್ನೇ ಕೊಚ್ಚಿಕೊಂಡು ಹೋಗುವಂತಿದೆ.

ಈ ಸ್ವಾತಿ ಎಂಬ ಮಳೆ ಹನಿ ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಪ್ರವಾಹ ಉಕ್ಕಿಸಿದ ಪರಿಣಾಮ ಅಲ್ಲಿಂದ ತಾನೇ ಕೊಚ್ಚಿಕೊಂಡು ಕುಮಟಾ ತಹಶೀಲ್ದಾರ ಕಚೇರಿ ಸೇರಿಕೊಂಡಿದೆ. ಕುಮಟಾದಲ್ಲಿ ದಿನದಿಂದ ದಿನಕ್ಕೆ ಸ್ವಾತಿ ಮಳೆಯ ಹನಿಗಳ ಅಬ್ಬರ ಜೋರಾಗುತ್ತಿದ್ದು, ಮೇಲಾಧಿಕಾಗಳಿಗೆ ಇದರ ಪ್ರವಾಹ ತಡೆಯೋದು ಬಹಳ ಕಷ್ಟವಾಗಿದೆ. ಇದು ಹೀಗೇ ಮುಂದುವರಿದರೆ ಆಡಳಿತ ಸೌಧದ ಮಾನ ಹರಾಜಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಹಶೀಲ್ದಾರ್ ಕಚೇರಿಯ ಬ್ರೋಕರುಗಳೇ ಹೇಳುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕು, ಜಿಲ್ಲೆಯ ಹಿರಿಯ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಮಹಿಳಾ ಅಧಿಕಾರಿಯ ಸ್ವಾತಿ ಪ್ರವಾಹಕ್ಕೆ ತಡೆಯೊಡ್ಡದಿದ್ದರೆ, ಇವಳನ್ನು ಇಲ್ಲಿಂದ ಎತ್ತಂಗಡಿ ಮಾಡದಿದ್ದರೆ ಮುಂದೆ ಇಡೀ ಸರ್ಕಾರಕ್ಕೆ ಕೆಟ್ಟ ಹೆಸರು ತಪ್ಪಿದ್ದಲ್ಲ ಎಂದು ಆಕೆಯಿಂದ ನೊಂದ ಫಲಾನುಭವಿಗಳು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಮತ್ತಷ್ಟು ಭೃಷ್ಟಾಚಾರದ ಹೊರ ಬರಲಿದೆ.