ಕಾರವಾರ ; ಯುದ್ಧನೌಕೆ, ಯುದ್ಧವಿಮಾನಗಳನ್ನ ನೋಡುವುದು ಅಂದರೆ ಒಂದು ರೀತಿಯ ಕುತೂಹಲ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ (Rabindranath Tagore Beach)ಕಳೆದ 18 ವರ್ಷಗಳಿಂದ ಯುದ್ಧನೌಕೆ ವಸ್ತುಸಂಗ್ರಹಾಲಯ ಲಕ್ಷಾಂತರ ಪ್ರವಾಸಿಗರನ್ನ(Tourists)ತನ್ನತ್ತ ಸೆಳೆದಿದ್ದು ಪ್ರವಾಸಿಗರಿಗೆ ಯುದ್ಧನೌಕೆಯನ್ನ ನೋಡುವ ಅನುಭವ ಒದಗಿಸಿಕೊಡುತ್ತಿದೆ.

ಇದೀಗ ಇದಕ್ಕೆ ಸೇರ್ಪಡೆ ಎನ್ನುವಂತೆ ಯುದ್ಧವಿಮಾನವೊಂದು ವಸ್ತುಸಂಗ್ರಹಾಲಯವಾಗಿ ಸಿದ್ಧಗೊಳ್ಳುತ್ತಿದೆ. ಕಳೆದ 2017ರಲ್ಲಿ ತಮಿಳುನಾಡಿನ ಅರಕ್ಕೋಣಂನಲ್ಲಿರುವ, ಐಎನ್ಎಸ್ ರಾಜಲಿ ನೌಕಾನೆಲೆಯಲ್ಲಿ ನಿವೃತ್ತಿಗೊಂಡ 5 ಟ್ಯುಪೋಲೆವ್-142 (Tupolev-142) ಯುದ್ಧವಿಮಾನಗಳ ಪೈಕಿ ಒಂದನ್ನ ಕಾರವಾರಕ್ಕೆ ನೀಡಿದ್ದು ಇದೀಗ ಮ್ಯೂಸಿಯಂ ಆಗಿ ಸಿದ್ಧಪಡಿಸಲಾಗುತ್ತಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬಿಡಿಭಾಗಗಳಾಗಿ ಬೇರ್ಪಡಿಸಿ ಕಾರವಾರಕ್ಕೆ ತಂದಿರುವ ಯುದ್ಧವಿಮಾನವನ್ನ ಜೋಡಣೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಐಎನ್ಎಸ್ ಚಾಪೆಲ್ ಯುದ್ಧನೌಕೆ(INS Chapel Warship,)ವಸ್ತುಸಂಗ್ರಹಾಲಯ ಆವರಣದಲ್ಲೇ ಯುದ್ಧವಿಮಾನ ಮ್ಯೂಸಿಯಂ(Museum) ಸಿದ್ದಗೊಳ್ಳುತ್ತಿದ್ದು ಪ್ರವಾಸಿಗರನ್ನ ಸೆಳೆಯುತ್ತಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಿವೃತ್ತವಾಗಿದ್ದ ಮತ್ತೊಂದು ಟುಪೊಲೆವ್ ಯುದ್ಧವಿಮಾನವನ್ನ ವಸ್ತುಸಂಗ್ರಹಾಲಯವಾಗಿ ಸ್ಥಾಪನೆ ಮಾಡಲಾಗಿದೆ. ಕರ್ನಾಟಕದಲ್ಲಿ ಈ ರೀತಿಯ ಯುದ್ಧವಿಮಾನ ವಸ್ತುಸಂಗ್ರಹಾಲಯ ಇದೇ ಮೊದಲಾಗಿದ್ದು ಈಗಾಗಲೇ ಚಾಪೆಲ್ ಮ್ಯೂಸಿಯಂ ವೀಕ್ಷಣೆಗೆ ಬರುವ ಪ್ರವಾಸಿಗರು ಯುದ್ಧವಿಮಾನ ಜೋಡಣೆಯನ್ನ ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ.

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಈಗಿರುವ ಚಾಪೆಲ್ ಯುದ್ಧನೌಕೆ ವಸ್ತುಸಂಗ್ರಹಾಲಯದ ಜೊತೆಗೆ ಟುಪೊಲೆವ್ ಯುದ್ಧವಿಮಾನ ಮ್ಯೂಸಿಯಂ ಸಹ ನಿರ್ಮಾಣವಾಗುವುದರಿಂದ ರಾಜ್ಯದಲ್ಲೇ ಪ್ರವಾಸಿಗರ ಆಕರ್ಷಣೆಯ ತಾಣವಾಗಿ(Uttarkannada Tourist Place,) ಮಾರ್ಪಾಡಾಗಲಿದೆ.ರಾಜ್ಯದಲ್ಲೇ ಮೊದಲ ಯುದ್ದವಿಮಾನ ವಸ್ತುಸಂಗ್ರಹಾಲಯ ಕಾರವಾರದಲ್ಲಿ ನಿರ್ಮಾಣವಾಗುತ್ತಿದೆ.