ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ‌ ಅಧಿಕಾರಕ್ಕೆ ಬಂದಿದೆ. ಎರಡೂವರೆ ವರ್ಷದ ಬಳಿಕ ಪಕ್ಷದೊಳಗೆ ಅಧಿಕಾರ‌ ಹಸ್ತಾಂತರ ನಡೆಯಬೇಕಿದೆ. ಹೀಗಾಗಿ ಈಗಿಂದಲೇ ತನ್ನ ಬುಡ ಭದ್ರಮಾಡಿಕೊಳ್ಳಲು ಡಿಸಿಎಂ ಡಿ. ಕೆ. ಶಿವಕುಮಾರ ಹೊಸ ರಣತಂತ್ರ ರೂಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ರಾಜ್ಯದಲ್ಲಿ 135 ಶಾಸಕರನ್ನು ಗೆದ್ದಿರುವ ಕಾಂಗ್ರೆಸ್ ತಮ್ಮದೆ ಶಾಸಕರ ಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿಯಾಗಿದೆ. ಆದರೂ ಸಹ ಡಿ. ಕೆ. ಶಿವಕುಮಾರ ಆಪರೇಷನ್ ಕಾಂಗ್ರೆಸ್ ಗೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದ್ದು, ಮುಂಬೈ ಬಾಯ್ಸ್ ಅವರನ್ನು ವಾಪಸ್ ಕರೆತರುವ ಬಗ್ಗೆ ಡಿ. ಕೆ. ಕಸರತ್ತು ನಡೆಸುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಸಿಎಂ ಸಿದ್ದರಾಮಯ್ಯ ಬಣದ ಶಾಸಕರಲ್ಲಿ ಹುಟ್ಟಿದೆ.

ಇದಕ್ಕೆ ಕಾರಣ ಬೇರೆನೇ ಇದೆ ಎಂದು ಹೇಳಲಾಗತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಡಿ. ಕೆ. ಶಿವಕುಮಾರ ಅವರ ಹೋರಾಟ ಸಾಕಷ್ಟಿದೆ. ಮೊದಲ ಅವಧಿಗೆ ತಾನೇ ಸಿಎಂ ಆಗಬೇಕು ಎಂದು ಆರಂಭದಲ್ಲ ಡಿ. ಕೆ. ಶಿವಕುಮಾರ ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದರು. ಆದರೆ ಕೈ ಹೈಕಮಾಂಡ ಎಲ್ಲವನ್ನೂ ತೂಗಿ ಅಳೆದು ಮೊದಲ ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಮಾಡಿದ್ದು, ಮುಂದಿನ ಎರಡೂವರೆ ವರ್ಷ ಡಿ. ಕೆ. ಶಿವಕುಮಾರ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆಸಿ ಸಿದ್ದರಾಮಯ್ಯ ಅವರನ್ನು ಮೊದಲ ಅವಧಿಗೆ ಸಿಎಂ ಖುರ್ಚಿ ನೀಡಲಾಗಿದೆಯಂತೆ.

ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಅಧಿಕಾರದ ಬಳಿಕ ಸಿಎಂ ಖುರ್ಚಿ ತನಗೆ ಬಿಟ್ಟುಕೊಡದೆ ಹೋದರೆ ಮುಂದೇನು ಎಂಬ‌ ಬಗ್ಗೆ ಯೋಚನೆಯಲ್ಲಿರೋ ಡಿಕೆಶಿ, ಆಪರೇಷನ್‌ ಕಾಂಗ್ರೆಸ್ ರಣತಂತ್ರ ನಡೆಸಿದ್ದಾರೆ ಎನ್ನುವ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲೇ ಚರ್ಚೆಯಾಗತ್ತಿದೆ.

ಒಂದು ವೇಳೆ ಸಿದ್ದರಾಮಯ್ಯ ಅವರು ತಮಗೆ ಅಧಿಕಾರ ನೀಡದೆ ತಾನೇ ಮುಂದುವರೆಯಬೇಕು ಎಂದು ಹಠ ಹಿಡಿದರೆ ತಮ್ಮ‌ ಪರ ಒಂದಿಷ್ಟು ಶಾಸಕರ ಗುಂಪನ್ನು ಇಟ್ಟುಕೊಂಡು ಗುಲ್ಲೆಬ್ಬಿಸಿ ಅಧಿಕಾರ ಪಡೆದುಕೊಳ್ಳಬೇಕು ಎನ್ನುವುದು ಡಿ. ಕೆ. ಶಿವಕುಮಾರ ಅವರ ರಾಜಕೀಯ ಲೆಕ್ಕಾಚಾರ ಎನ್ನುವ ಮಾತು ಕೇಳಿ ಬರತ್ತಿದೆ.

ಇದು ಸತ್ಯ ಆದರೂ ಅಚ್ಚರಿಯಿಲ್ಲ, ಹೀಗಾಗಿಯೇ ಸರಕಾರ ನಡೆಸಲು ತಮ್ಮ‌ ಬಳಿ 135 ಶಾಸಕರಿದ್ದರೂ ಸಹ ಮತ್ತೆ ಮುಂಬೈ ಬಾಯ್ಸ್ ಟೀಂನಲ್ಲಿದ್ದ ಒಂದಿಷ್ಟು ಹಾಲಿ ಶಾಸಕರನ್ನು ವಾಪಸ್ ಪಕ್ಷಕ್ಕೆ ಕರೆದುಕೊಂಡು ಅವರನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುವುದು ಡಿಕೆಶಿ ಪ್ಲಾನ್. ಒಂದೊಮ್ಮೆ ಇದು ಯಶಸ್ವಿ ಯಾದರೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಒಂದಿಷ್ಟು ಮಂದಿಯನ್ನು ಕೈ ಬಿಟ್ಟು ಆಪರೇಷನ್ ಕಾಂಗ್ರೆಸ್ ಮೂಲಕ ಯಾರೆಲ್ಲಾ ಪಕ್ಷಕ್ಕೆ ಬರತ್ತಾರೆ ಅವರಿಗೆ ತಾನು ಸಿಎಂ ಆದ ಮೇಲೆ ಸಚಿವ ಸ್ಥಾನ ನೀಡುವ ಭರವಸೆ ನೀಡಿಯೇ ಡಿ. ಕೆ. ಶಿವಕುಮಾರ ಈ ಹೊಸ ರಣತಂತ್ರಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.

ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿರುವ ಒಂದಿಷ್ಟು ಹಾಲಿ ಶಾಸಕರು ತಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೆ ಇರುವ ಕಾರಣ ತಮ್ಮ ಯಾವ ಕೆಲಸಗಳು ಆಗುವುದಿಲ್ಲ. ಈಗ ನಾವು ಡಿ. ಕೆ. ಶಿವಕುಮಾರ ಅವರು ಕರೆದಾಗಲೇ ಕಾಂಗ್ರೆಸ್ ಸೇರಿಕೊಂಡು ಬಿಟ್ಟರೆ ಮುಂದೆ ಅವರು ಸಿಎಂ ಆದ ಬಳಿಕ ಮತ್ತೆ ತಾವು ಮಂತ್ರಿಯಾಗಬಹುದು ಎನ್ನುವದು ಕಾಂಗ್ರೆಸ್ ಗೆ ಹೋಗಲು ತುದಿಗಾಲ ಮೇಲೆ ನಿಂತಿರುವ ಬಿಜೆಪಿ, ಜೆಡಿಎಸ್ ಶಾಸಕರ ಲೆಕ್ಕಾಚಾರ.

ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.