ಕುಮಟಾ : ವಿಧಾನಸಭೆ ಮಹಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಲೇ ಇದ್ದು, ಇನ್ನು ಬೆರಳೆಣಿಕೆ ದಿನವಷ್ಟೇ ಬಾಕಿಯಿದೆ. ಕುಮಟಾ ಜೆಡಿಎಸ್ ಕಾರ್ಯಕರ್ತರು ಗೆಲುವು ತಮ್ಮದೇ ಎಂಬ ಹುಮ್ಮಸ್ಸಿನಲ್ಲಿ ಹಗಲಿರುಳು ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಮುಖಂಡರು ತಾವೆಲ್ಲ ಒಂದು ಎಂದು ಸಾರುತ್ತ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಮತ ಯಾಚಿಸುತ್ತಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಒಲ್ಲದ ಮನಸ್ಸಿನಲ್ಲಿ ಜನರೆದುರು ಹೋಗುತ್ತಿದ್ದು, ಜನರ ನೀರಸ ಪ್ರತಿಕ್ರಿಯೆ ಕಂಡು ವಾಪಾಸ್ಸಾಗುತ್ತಿದ್ದಾರೆ.

ಎಲ್ಲರಂತೆ ಬಿಜೆಪಿ ಕಾರ್ಯಕರ್ತರು ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಆದರೆ ಬಹಳ ನಿರೀಕ್ಷೆ ಇಟ್ಟುಕೊಂಡು ಹೋಗುವ ಬಿಜೆಪಿ ಕಾರ್ಯಕರ್ತರು ನಿರಾಶರಾಗುತ್ತಿದ್ದಾರೆ. ಕಾರಣ ಕಾರ್ಯಕರ್ತರು ಹೋಗುವ ಬಹುತೇಕ ಕಡೆ `ಅಭ್ಯರ್ಥಿ ಬದಲಾಯಿಸಿದರೆ ಚೆನ್ನಾಗಿತ್ತು'' ಎಂಬ ಜನರ ಉತ್ತರ ಕಂಡು ಕಾರ್ಯಕರ್ತರು ತತ್ತರಗೊಂಡಿದ್ದಾರೆ. ಶಾಸಕ ದಿನಕರ ಶೆಟ್ಟರಿಗೆ ಟಿಕೆಟ್ ಸಿಗುವ ಮುನ್ನ ಇಡೀ ಜಿಲ್ಲೆಯಲ್ಲಿಯೇ ಕುಮಟಾ ಕ್ಷೇತ್ರದ ಟಿಕೆಟ್ ಬಗ್ಗೆ ಭಾರೀ ಚರ್ಚೆ ಆಗಿತ್ತು. ಸಂಘ ಪರಿವಾರದ ಕಾರ್ಯಕರ್ತರೆಲ್ಲ ಈ ಬಾರಿ ಕುಮಟಾ ಕ್ಷೇತ್ರದ ಟಿಕೆಟ್ ಬದಲಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದರು. ಕೆಲ ಹಿರಿಯ ಕಾರ್ಯಕರ್ತರಂತೂ ಗುಜರಾತ್ ಮಾಡೆಲ್, ಉತ್ತರ ಪ್ರದೇಶ ಮಾಡೆಲ್ ರೀತಿ ಟಿಕೆಟ್ ಬದಲಾಗುತ್ತದೆ, ಹೊಸ ಮುಖಕ್ಕೆ ಅವಕಾಶ ಸಿಗುತ್ತದೆ ಎಂದು ಊರಿಡೀ ಹೇಳುತ್ತಾ ತಿರುಗಾಡಿದ್ದರು. ಆದರೆ ಟಿಕೆಟ್ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೂ ಟಿಕೆಟ್ ಬದಲಾಗಿರಲಿಲ್ಲ. ಎಲ್ಲ ಹಳೇ ಮುಖಗಳೆ ರಾರಾಜಿಸುತ್ತಿದ್ದವು. ಇದನ್ನು ಕಂಡು ಹಿರಿಯ ಕಾರ್ಯಕರ್ತರು ಅತೀವ ಬೇಸರಗೊಂಡರು. ಈ ಮಧ್ಯೆ ಬಿಜೆಪಿಯ ಮಾತೃ ಸಂಘವಾದ ಆರ್‍ಎಸ್‍ಎಸ್ ಎಲ್ಲ ಕಾರ್ಯಕರ್ತರ ಸಭೆ ಕರೆದುಥರ್ಡ್ ಪಾರ್ಟಿ’ ಪ್ರಚಾರ ಮಾಡಬೇಕೆಂದು ಮನವಿ ಮಾಡಿತು. ಆದರೆ ಅನೇಕ ಹಿರಿಯ ಕಾರ್ಯಕರ್ತರು ಆರ್‍ಎಸ್‍ಎಸ್ ಒಳಮರ್ಮ ಮೊದಲೇ ಅರಿತು ಸಭೆಯಿಂದ ದೂರ ಉಳಿದರು. ಸಭೆಗೆ ಬಂದ ಕೆಲವರಂತೂ ನಾವು ಪ್ರಚಾರ ಕಾರ್ಯಕ್ಕೆ ಬರುವುದಿಲ್ಲ ಎಂದು ನೇರ ಹೇಳಿದರು. ಇದರಿಂದಾಗಿ ವಿಶ್ವದ ಅತೀ ದೊಡ್ಡ ಸಂಘಟನೆಯಾದ ಆರ್‍ಎಸ್‍ಎಸ್ ಕೂಡ ಶಾಸಕ ಅಭ್ಯರ್ಥಿ ವಿಚಾರವಾಗಿ ತಲೆ ತಗ್ಗಿಸುವಂತಾಯಿತು.

ಹೊನ್ನಾವರದಲ್ಲೂ ವಿರೋಧ

ಜಿಲ್ಲಾ ಬಿಜೆಪಿ ಮುಖಂಡ, ಕುಮಟಾದ ಹೆಗಡೆ ಗ್ರಾಮದ ಆರ್‍ಎಸ್‍ಎಸ್ ವ್ಯಕ್ತಿಯೊಬ್ಬರು ಹೊನ್ನಾವರಕ್ಕೆ ತೆರಳಿ ಅಲ್ಲಿನ ಹಿರಿಯ ಕಾರ್ಯಕರ್ತರ ಮನವೊಲಿಸಲು ವಿಫಲ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಹೊನ್ನಾವರ ಹಿರಿಯ ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಭೇಟಿಯಾದ ಹೆಗಡೆ ವ್ಯಕ್ತಿ ಅವರ ಮನವೊಲಿಸಲು ಪ್ರಯತ್ನಿಸಿದಾಗ ಹೆಗಡೆ ವ್ಯಕ್ತಿ ವಿರುದ್ಧವೇ ಆಕ್ರೋಶಗೊಂಡ ಹೊನ್ನಾವರದ ಕಾರ್ಯಕರ್ತರು, `ನೀವು ನಿಷ್ಕ್ರಿಯ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದೀರಿ, ಬೇರೆಯವರಿಗೆ ಟಿಕೆಟ್ ನೀಡಿದ್ದರೆ ನಾವೆಲ್ಲ ಬಿಜೆಪಿ ಗೆಲುವಿಗೆ ಶ್ರಮ ಪಡುತ್ತಿದ್ದೇವು. ಆದರೆ ನಿಷ್ಕ್ರಿಯರನ್ನು ಎಬ್ಬಿಸಲು ಸಾಧ್ಯವೇ?'' ಎಂದು ಆಕ್ರೋಶಿತರಾಗಿ ಪ್ರಶ್ನಿಸಿದ್ದು, ಹೆಗಡೆ ವ್ಯಕ್ತಿ (ಹೊಳೆಗದ್ದೆ ಟೋಲಲ್ಲಿ ಟೋಲ್ ಕೊಟ್ಟು ಹೋದರೂ)ಬಂದ ದಾರಿಗೆ ಸುಂಕವಿಲ್ಲ’ ಎನ್ನುವಂತೆ ವಾಪಾಸಾಗಿದ್ದಾರೆ.

ನೋಟಾದತ್ತ ಒಲವು

ಭಾರತೀಯ ಜನತಾ ಪಾರ್ಟಿ’ ಹುಟ್ಟಿದಾಗಿನಿಂದ ಈ ಪಕ್ಷಕ್ಕಾಗಿಯೇ ತಮ್ಮ ಮತಗಳನ್ನು ಮೀಸಲಿಟ್ಟ ವ್ಯಾಪಾರಿ ಸಮುದಾಯವೊಂದು ಈ ಬಾರಿ ಭಾಜಪಾ ವಿರುದ್ಧ ತಿರುಗಿ ಬಿದ್ದಿರುವುದು ಅಚ್ಚರಿ ಮೂಡಿಸಿದೆ.

`ನಾವು ಬಹಳ ನಿರೀಕ್ಷೆ ಇಟ್ಟುಕೊಂಡು ಹಿಂದೆ ಭಾಜಪಾ ಅಭ್ಯರ್ಥಿಗೆ ನಮ್ಮ ಅಮೂಲ್ಯ ಮತ ನೀಡಿದ್ದೇವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ಬಿಜೆಪಿಗನಾಗಿ ಅನ್ಯಕೋಮಿನಹಾರ್ಡ್‍ವೇರ್ ಉದ್ಯಮಿ’ ಜೊತೆ ಶಾಸಕರ ಸಖ್ಯ ಸಹಿಸಲಾಗದು. ಇವರ ಅನೇಕ ಬೇನಾಮಿ ಆಸ್ತಿಗೆ ಅನ್ಯಕೋಮಿನ ಹಾರ್ಡ್‍ವೇರ್ ಉದ್ಯಮಿಯೇ ಯಜಮಾನ. ಶಿವಮೊಗ್ಗಾದಿಂದ ನೂರ್'ರೂಪಾಯಿ ಸಂಬಳಕ್ಕೆ ಕುಮಟಾಕ್ಕೆ ಬಂದ ಅನ್ಯಕೋಮಿನ ವ್ಯಕ್ತಿ ಕುಮಟಾದಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನಿಗೆ ಒಡೆಯನಾಗುತ್ತಾನೆ, ಅತೀ ದೊಡ್ಡ ಹಾರ್ಡ್‍ವೇರ್ ಶಾಪ್ ಮಾಲಕನಾಗುತ್ತಾನೆ, ಲ್ಯಾಂಡ್ ಡೀಲಿಂಗಿನಲ್ಲಿ ನಮ್ಮವರನ್ನೇ ಬೆದರಿಸುತ್ತಾನೆ ಎಂದರೆ ನಾವು ಸಹಿಸಲಾಗದು. ಇದನ್ನು ನೋಡಿ ಸುಮ್ಮನಿರಲು ಸಾಧ್ಯವೇ ಇಲ್ಲ. ಬಿಜೆಪಿಯಿಂದ ಬೇರೆ ಯಾರೇ ಅಭ್ಯರ್ಥಿ ಆದರೂ ನಾವು ಬೆಂಬಲಿಸುತ್ತಿದ್ದೇವು. ಆದರೆ ಈಗ ನಾವು ಈ ಅಭ್ಯರ್ಥಿಗೆ ಬೆಂಬಲಿಸುವುದಿಲ್ಲ. ನಾವು ಬೇರೆಯವರಿಗೆ ಅಥವಾ ಬೇರೆ ಪಕ್ಷಕ್ಕೆ ಮತ ನೀಡಿದರೆ ಪಕ್ಷ ದ್ರೋಹ ಆಗುತ್ತದೆ. ಹಾಗಾಗಿ ನಾವು ಬಿಜೆಪಿ ವಿರುದ್ಧ ಹೋಗುವುದಿಲ್ಲ. ನಾವುನೋಟಾ’ಕ್ಕೆ (ನನ್ ಆಫ್ ದಿ ಅಬವ್) ಮತ ನೀಡುತ್ತೇವೆ” ಎಂದು ಮಾರುಕಟ್ಟೆಯ ವ್ಯಾಪಾರಿ ಸಮುದಾಯದ ಮಂದಿ ಖುಲಂ ಖುಲ್ಲಾ ಹೇಳುತ್ತಿದ್ದಾರೆ.

ಜನರ ಬೆಲೆ ಕೇವಲ
300 ರೂಪಾಯಿ

ಕುಮಟಾದ ಭಾಜಪಾ ಅಭ್ಯರ್ಥಿ ತನ್ನ ನಾಮಪತ್ರ ಸಲ್ಲಿಸುವ ವೇಳೆ 5-6 ಸಾವಿರ ಜನರನ್ನು ಸೇರಿಸಿ `ಊರಿನ ಜನರೆಲ್ಲ ನನ್ನ ಜೊತೆಯೇ ಇದ್ದಾರೆ’ ಎಂದು ಸಾಬೀತು ಪಡಿಸುವ ಘನ ಕಾರ್ಯ ಮಾಡಿದ್ದರು. ಕಾಂಗ್ರೆಸ್ ಹೊರತು ಪಡಿಸಿ ಇತರೇ ಪಕ್ಷದ ಮುಖಂಡರು, ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿಗಳು ಶಾಸಕರ ಸಾಧನೆ ಕಂಡು ದಂಗಾಗಿದ್ದರು. ಆದರೆ ಈ ಆಶ್ಚರ್ಯಕರ ಚಿಹ್ನೆ ಬಹಳ ದಿನ ಉಳಿಯುವ ಮುನ್ನವೇ ಅಳಸಿ ಹೋಯಿತು. ಯಾಕೆಂದರೆ ಭಾಜಪಾ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ಬಂದ ಅಮಾಯಕ ನಾಗರಿಕರ ಬೆಲೆ ಕೇವಲ 300 ರೂಪಾಯಿ ಎನ್ನುವುದು ಶೀಘ್ರದಲ್ಲೇ ಜಗಜ್ಜಾಹೀರಾಯಿತು.

ಬಿಜೆಪಿಯ ಅದ್ಧೂರಿ ಮೆರವಣಿಗೆ ಕಂಡು ಕಾಂಗ್ರೆಸ್ಸಿಗರು ಯಾಕೆ ದಂಗಾಗಲಿಲ್ಲ, ಅಚ್ಚರಿಗೊಳ್ಳಲಿಲ್ಲ ಎಂದರೆ ಅವರು ಕೂಡ 300 ರೂಪಾಯಿ ಕೊಟ್ಟು ಇಡೀ ಜಿಲ್ಲೆಯಿಂದ ಬಿಜೆಪಿಗರು ಸೇರಿಸಿದ್ದಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಬಿಜೆಪಿ ಅಭ್ಯರ್ಥಿ ಸಹಿತ ಮುಖಂಡರು ಅಚ್ಚರಿಗೊಳ್ಳುವಂತೆ ಮಾಡಿದ್ದರು.

ನಾಕಾದಲ್ಲಿ ಸಿಕ್ಕಿಬಿತ್ತು ಹಣ

ಇತ್ತೀಚೆಗೆ ಶಿವಮೊಗ್ಗಾದಿಂದ ರಿಕ್ಷಾದಲ್ಲಿ ಕುಮಟಾಕ್ಕೆ ತರುತ್ತಿದ್ದ ಕೋಟ್ಯಾಂತರ ಹಣ ಚಂದಾವರ ನಾಕಾದಲ್ಲಿ ಚುನಾವಣಾ ಬಂದೋಬಸ್ತಿಗಿದ್ದ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು, ಈ ಹಣದ ಸೂಟ್ಕೇಸ್ ಜೊತೆ ಕುಮಟಾ ತಾಲೂಕಿನ ಕಾಗಲದ ಉದ್ಯಮಿ ರವಿ ಪಂಡಿತ್ ಕೂಡ ಸಿಕ್ಕಿ ಬಿದ್ದಿದ್ದು, ಇದು ಯಾರ ಹಣ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಪಂಡಿತ್ ಎನ್ನುವಾತ ಶಾಸಕರ ಪರಮಾಪ್ತನಾಗಿದ್ದು, ಇದು ಶೆಟ್ಟರ ಹಣವೇ ಆಗಿತ್ತು ಎಂದು ಇತರೇ ಪಕ್ಷದ ಮುಖಂಡರು ಒಳಗೊಳಗೆ ಖುಷಿ ಪಡುತ್ತಿದ್ದಾರೆ.

ಇದೇ ರಿಕ್ಷಾದಲ್ಲಿದ್ದ ಇನ್ನೊಂದು ಹಣದ ಕಂತೆ ತುಂಬಿದ್ದ ಸೂಟ್ಕೇಸ್ ಸಂತೆಗುಳಿ'ಯಲ್ಲಿ ಇಳಿಸಲಾಗಿದೆ ಎಂಬ ಸುದ್ದಿ ಊರಿಡಿ ಹರಡಿದ್ದು, ಈ ಸೂಟ್ಕೇಸ್ ಸಂತೆಗುಳಿ ಸಮೀಪದ ಹರವಳ್ಳಿಯ ವಿಘ್ನವಿನಾಶಕನ ಮನೆ ತಲುಪಿತೇ ಎಂಬ ಅನುಮಾನವೂ ಜನರಿಗಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದರೆ ಭ್ರಷ್ಟಾಚಾರದ ಹಣ ಎಲ್ಲಿದೆ ಎನ್ನುವುದು ತಾವೇ ಸಂಭಾವಿತರು ಎನ್ನುವಶಿಸ್ತಿನ ಪಕ್ಷ’ದ ಕಾರ್ಯಕರ್ತರಿಗೆ ಸ್ಪಷ್ಟವಾಗುತ್ತದೆ.

ಟೋಲ್ ದರ ಏರಿಕೆ
ವಿರುದ್ಧ ಜನಾಕ್ರೋಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಐಆರ್‍ಬಿ ಕಂಪೆನಿ ನಡೆಸುತ್ತಿರುವ ಹೆದ್ದಾರಿ ಚತುಷ್ಪಥ ಕಾಮಗಾರಿ ಭಟ್ಕಳದಿಂದ ಕಾರವಾರದವರೆಗೆ ಎಲ್ಲಿಯೂ ಪೂರ್ಣಗೊಂಡಿಲ್ಲ. ಆದರೂ ಟೋಲ್ ವಸೂಲಿ ನಡೆಯುತ್ತಿದೆ. ಟೋಲ್ ಆರಂಭದ ಹೊಸತರಲ್ಲಿ ಇದೇ ಶಾಸಕ ದಿನಕರ ಶೆಟ್ಟರು ಜನಪರ ದನಿಯೆತ್ತಿ ಹ್ಞುಂ ಹ್ಞುಂ ಎಂದು ಅಬ್ಬರಿಸಿದ್ದರು. ಪ್ರತಿಭಟನೆ ಹಮ್ಮಿಕೊಂಡಿದ್ದರು, ಉದ್ದೂದ್ದ ಭಾಷಣ ಮಾಡಿದ್ದರು. ಆದರೆ ನಂತರದಲ್ಲಿ ಟೋಲ್ ವಿರುದ್ಧ ಇವರ ಕೋಪ ತಾಪವೆಲ್ಲ ಕಡಿಮೆಯಾಗಿ ಐಆರ್‍ಬಿ ಹೆಸರು ಕೇಳಿದರೆ ತಣ್ಣಗಾಗಲು ಶುರು ಮಾಡಿದರು. ಆದರೆ ಸ್ಥಳೀಯ ಜನ ಮಾತ್ರ ಟೋಲ್ ದಾಟುವಾಗ ಶಾಸಕರ ಬೇಜವಬ್ದಾರಿತನವನ್ನು ಸ್ಮರಿಸಿಯೇ ಸಾಗುತ್ತಿದ್ದರು. ಈ ಮಧ್ಯೆ ಎಪ್ರಿಲ್ 1ರಿಂದ ಟೋಲ್ ದರ ಹೆಚ್ಚಾಗಿದ್ದು, ಜನಾಕ್ರೋಶ ಭುಗಿಲೆದ್ದಿದೆ. ಕೆಲ ಚಾಲಕರು, ವಾಹನ ಮಾಲಕರು ಶಾಸಕರ ನಿಷ್ಕ್ರಿಯತೆ ಪ್ರಶ್ನಿಸುತ್ತಿದ್ದು, “ವಾಹನ ನೋಂದಣಿ ಮಾಡುವಾಗಲೇ ಟ್ಯಾಕ್ಸ್ ಪಡೆದಿರುತ್ತಾರೆ. ಆದರೂ ಈ ಅಡ್ಡಾದಿಡ್ಡಿ ಅಪಾಯಕಾರಿ ರಸ್ತೆಯಲ್ಲಿ ಓಡಾಡುವುದಕ್ಕೂ ಟೋಲ್ ಕಟ್ಟಬೇಕು” ಎಂದು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.