ಸುದ್ದಿಬಿಂದು ಬ್ಯೂರೋ
ಕಾರವಾರ:
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ನಾಮಪತ್ರ ಸಲ್ಲಿಸಿರುವ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರ ಆಸ್ತಿ, ಜೊತೆ ಜೊತೆಗೆ ಸಾಲ ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

2018ರ ಚುನಾವಣೆಯಲ್ಲಿ ಅಫಿಡವಿಟ್ ಸಲ್ಲಿಸಿದ್ದ ರೂಪಾಲಿ ನಾಯ್ಕ, ಸ್ಥಿರಾಸ್ಥಿಯಾಗಿ 1.03 ಕೋಟಿಯ ಕೃಷಿ ಮತ್ತು ವಾಸ್ತವ್ಯದ ಮನೆಯನ್ನು ಹೊಂದಿದ್ದರು.ಆದರೆ ಈ ಬಾರಿ ಈ ಸ್ಥಿರಾಸ್ತಿ 3.50 ಕೋಟಿಗೆ ಏರಿಕೆಯಾಗಿದೆ!
ಕಳೆದ ಚುನಾವಣೆಯ ಸಮಯದಲ್ಲಿ ಕೇವಲ ಅಂಕೋಲಾದ ಹಿಲ್ಲೂರಿನಲ್ಲಿ 2 ಎಕರೆ ಕೃಷಿ ಭೂಮಿ, ಕಾರವಾರದ ದೇವಳಿವಾಡದಲ್ಲಿ ಎರಡು ವಾಸ್ತವ್ಯದ ಮನೆ ಹೊಂದಿದ್ದ ಅವರು, ಈ ಚುನಾವಣೆಯ ಸಮಯದಲ್ಲಿ ಇವುಗಳ ಜೊತೆಗೆ ಕಾರವಾರದ ನಗೆಕೋವೆ, ನಿವಳಿ, ಮೈಸೂರಿನ ವರುಣಾದಲ್ಲಿ ಒಟ್ಟು 32 ಎಕರೆ 36 ಗುಂಟೆ ಕೃಷಿ ಭೂಮಿ, ಒಂದು ವಾಣಿಜ್ಯ ಕಟ್ಟಡ, ದೇವಳಿವಾಡಾದಲ್ಲಿ 3 ಗುಂಟೆಯ ಕೃಷಿಯೇತರ ಜಾಗ ಖರೀದಿಸಿದ್ದಾರೆ.

ಕೈಯಲ್ಲಿ 1,86,980 ರೂ. ಹೊಂದಿರುವ ಅವರು, ಯೂನಿಯನ್ ಬ್ಯಾಂಕ್‌ನಲ್ಲಿ 2.70 ಲಕ್ಷ ಠೇವಣಿ, ವಿವಿಧ ಬ್ಯಾಂಕ್‌ಗಳ 15 ಉಳಿತಾಯ ಖಾತೆಗಳಲ್ಲಿ 19.26 ಲಕ್ಷ ರೂ., ಮಲ್ಲಿಕಾರ್ಜುನ ಅರ್ಥಮೂವರ್ಸ್ ಹೆಸರಿನ ಎರಡು ಖಾತೆಗಳಲ್ಲಿ 3 ಲಕ್ಷ ರೂ., 10 ಜೀವವಿಮೆ ಪಾಲಿಸಿಗಳಲ್ಲಿ 50 ಲಕ್ಷ, ಪತಿಯ ಹೆಸರಿನಲ್ಲಿ 1 ಲಕ್ಷದ ಒಂದು ಜೀವವಿಮೆ ಮಾಡಿಸಿದ್ದಾರೆ. 22.38 ಲಕ್ಷ ಮೌಲ್ಯದ 516 ಗ್ರಾಂ ಚಿನ್ನ, 1670 ಗ್ರಾಂ ಬೆಳ್ಳಿ, ಪತಿಯ ಹೆಸರಿನಲ್ಲಿ 5.60 ಲಕ್ಷ ಮೌಲ್ಯದ 140 ಗ್ರಾಂ ಇದರೊ೦ದಿಗೆ ಇನೋವಾ ಹುಂಡೆ ಎಲೆಂಟ್ರಾ,ಟಾಟಾ ವೆಂಚರ್, ಟಾಟಾ ಹಿಟಾಚಿ ವಾಹನ ಹೊಂದಿದ್ದಾರೆ.

ಆದರೆ ಅವರ ಪತಿ ಹೆಸರಲ್ಲಿ ಒಂದು ಪಲ್ಸರ್ ಬೈಕ್ ಮಾತ್ರ ಇದೆ‌ ಘೋಷಣೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಯೂನಿಯನ್ ಬ್ಯಾಂಕ್‌ನಲ್ಲಿ 18.18 ಲಕ್ಷ, 4.86 ಲಕ್ಷ, 23.80 ಲಕ್ಷ, 760 ಲಕ್ಷ ಹೀಗೆ ಒಟ್ಟು 54,44 ಲಕ್ಷ ಹಾಗೂ ಕಾರವಾರದ ಸೆಂಟ್ ಮಿಲಾಗ್ರಿಸ್ ಕ್ರಿಡಿಟ್ ಸೌಹಾರ್ದದಲ್ಲಿ 91.44 ಲಕ್ಷ, ಒಟ್ಟು 1,45 ಕೋಟಿ ರೂ. ಸಾಲವನ್ನೂ ಮಾಡಿಕೊಂಡಿದ್ದಾರೆ. ಕಳೆದ ಚನಾವಣೆಯಲ್ಲಿ ಈ ಸಾಲ 32.67 ಲಕ್ಷ ರೂ. ಇತ್ತು.