ಕಾರವಾರ: ನಗರದ ವಿವಿಧ ಭಾಗದಲ್ಲಿ ಸ್ವಚ್ಚತಾ ಕಾರ್ಯವನ್ನ ಕಳೆದ ಎಂಟು ವರ್ಷದಿಂದ ಮಾಡುತ್ತಾ ಬಂದಿರುವ ಪಹರೆ ವೇದಿಕೆ ಕಾರ್ಯಕರ್ತರು ಕಾಳಿ ಸೇತುವೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಕಸವನ್ನ ಸ್ವಚ್ಚಗೊಳಿಸುವ ಮೂಲಕ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಕಸ ಎಸೆಯುವ ಕೇಂದ್ರವಾಗಿದ್ದು ಈ ಬಗ್ಗೆ ಜಾಗೃತಿ ಮೂಡಿಸಲು ಹೆದ್ದಾರಿ ಪಕ್ಕದಲ್ಲಿ ಸ್ವಚ್ಚತೆ ಕಾರ್ಯವನ್ನ ಪಹರೆ ವೇದಿಕೆ ಕಾರ್ಯಕರ್ತರು ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಸದಾಶಿವಗಡದ ಕಾಳಿ ಸೇತುವೆ ಬಳಿಯ ಮುಗಿದ ತಕ್ಷಣ ಬರುವ ಪ್ರದೇಶದಲ್ಲಿ ಕಸದ ರಾಶಿಯೇ ಬಿದ್ದು ಸೌಂದರ್ಯಕ್ಕೆ ಅಡ್ಡಿ ಬಂದಿರುವ ಹಿನ್ನಲೆಯಲ್ಲಿ ಸ್ವಚ್ಚತಾ ಕಾರ್ಯವನ್ನ ಪಹರೆ ತಂಡ ಮಾಡಿದರು.
ಎರಡನೇ ವಾರದ ಸ್ವಚ್ಚತೆಯನ್ನ ಕಾಳಿ ಸೇತುವೆ ಬಳಿ ಮಾಡಿದ ಪಹರೆ ವೇದಿಕೆ ಕಾರ್ಯಕರ್ತರು ಸೇತುವೆಯಿಂದ ಕೆಳಗೆ ಎಸೆದಿದ್ದ ರಾಶಿಗಟ್ಟಲೇ ಮಧ್ಯದ ಬಾಟಲಿ, ಪ್ಲಾಸ್ಟಿಕ್, ಗಾಜಿನ ತುಂಡುಗಳು, ಅಪಾಯಕಾರಿ ಇ-ತ್ಯಾಜ್ಯವನ್ನ ಹಾಗೂ ಗಿಡಗಂಟೆಗಳನ್ನ ಸ್ವಚ್ಚಗೊಳಿಸಿದರು.
ಇದಲ್ಲದೇ ಇನ್ನು ಸಾಕಷ್ಟು ಪ್ರಮಾಣದಲ್ಲಿ ಕಸವಿದ್ದು ಕಾಳಿ ಸೇತುವೆ ಕಾರವಾರಕ್ಕೆ ಬರುವ ಪ್ರವಾಸಿಗರನ್ನ ಆಕರ್ಷಿಸುವ ಸ್ಥಳವಾಗಿದ್ದು ಇಂತಹ ಸ್ಥಳವನ್ನ ಸುಂದರವಾಗಿಟ್ಟುಕೊಳ್ಳುವುದು ಎಲ್ಲರ ಜವಬ್ದಾರಿ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಕಾಳಿ ಸೇತುವೆ ಮುಗಿದ ನಂತರ ಬರುವ ಪ್ರದೇಶ ನಗರಸಭೆಗೆ ಬರುತ್ತದೆಯೋ ಅಥವಾ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಗೆ ಬರುತ್ತದೆಯೋ ಅನ್ನುವ ಗೊಂದಲ ಉಂಟು ಮಾಡುತ್ತದೆ. ಕಸ ಎಸೆಯುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿ ಪ್ರಕರಣಗಳನ್ನ ದಾಖಲಿಸಿದರೆ ಇದಕ್ಕೆ ಕಡಿವಾಣ ಹಾಕಬೇಕು.
ಅಪಾಯಕಾರಿ ಇ ತ್ಯಾಜ್ಯ ಎಸೆಯುತ್ತಿದ್ದಾರೆ. ಬಾಟಲಿಗಳು ಸೇತುವೆಯಿಂದ ಪ್ರಕೃತಿ ಸೌಂದರ್ಯ ವೀಕ್ಷಣೆ ಮಾಡಲು ಬರುವವರ ಕಾಲಿಗೆ ತಗುಲಿ ಗಾಯಗಳಾಗುವಂತಿದೆ. ಅಲ್ಲದೇ ಹೆದ್ದಾರಿ ಕಾಮಗಾರಿ ಮುಗಿದಿದ್ದು ಕಸ ಎಸೆಯುವ ಜಾಗ ಉದ್ಯಾನವನ ಮಾಡಿದರೆ ಕಸ ಎಸೆಯುವುದಕ್ಕೂ ಕಡಿವಾಣ ಬೀಳಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.