ಶಿರಸಿ: ಪರೇಶ್ ಮೇಸ್ತಾ ಅನಾಥವಾಗಿ ಹೋದ. ರಕ್ತ ಬಲಿದಾನವಾದರೂ ಏನೂ ಆಗಲಿಲ್ಲ. ಅವನ ಹೆಣದ ಮೇಲೆ ರಾಜಕೀಯ ಮಾಡಿದರು. ಅವನ ಆತ್ಮಕ್ಕೆ ನ್ಯಾಯ ಕೊಡಿಸಿ ಎಂದು ಹೇಳುತ್ತಿದೆ. ನನ್ನ ತಂದೆ- ತಾಯಿಯನ್ನ ವೇದಿಕೆ ಮೇಲೆ ಕೂರಿಸಿ ಹಿಂದೂಗಳ ಆಕ್ರೋಶದ ಲಾಭ ಪಡೆದ ನಾಲಾಯಕ, ನಿರ್ಲಜ್ಜರು ನೀವು, ನ್ಯಾಯ ಕೊಡಿ ಎಂದು ಅವನ ಆತ್ಮ ಹೇಳುತ್ತಿದೆ. ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸೈಹಾದ್ರಿ ರಂಗಮಂದಿರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಏರ್ಪಡಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿರುವ ಅವರು, ಆರೇಳು ಬಾರಿ ಗೆದ್ದವರು ಇಲ್ಲಿದ್ದಾರೆ. ಈ ಬಾರಿಯೂ ಮೋದಿಗೆ ವೋಟ್ ಹಾಕಿ ಎಂದು ಬರುವ ನಾಲಾಯಕರಿಗೆ ಚಪ್ಪಲಿಯಲ್ಲಿ ಹೊಡಿರಿ ಎಂದ ಮುತಾಲಿಕ್ ಬಿಜೆಪಿ ವಿರುದ್ದ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ.
ಕರ್ನಾಟಕವನ್ನು ಲೂಟಿ ಮಾಡಿದವರು ಇದ್ದಾರೆ. ಮೊದಲು ಇದ್ದಾಗ ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ಅಳೆಯಲೂ ಆಗಷ್ಟು ಗಳಿಸಿ ಗಳಿಸಿ ಇಟ್ಟಿದ್ದಾರೆ. ಯಾರಿಗಾಗಿ ಗಳಿಸಿದ್ದೀರಿ? ಯಾರಿಗಾಗಿ ಬಂದಿದ್ದು ಎಂಬುದು ನೆನಪಿದೆಯಾ? ಜನಸಂಘ ಹುಟ್ಟಿದ್ದು ಯಾಕೆ ಎನ್ನುವುದು ನೆನಪಿದೆಯಾ? ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದು ನೆನಪಿದೆಯಾ? ಎಂದು ಆಕ್ರೋಶಭರಿತರಾಗಿದ್ದಾರೆ.
ಸಾವಿರಾರು ವರ್ಷಗಳಿಂದಲೂ ಗೋಮಾತೆಯನ್ನು ಉಳಿಸಿ ಎಂದು ಋಷಿಮುನಿಗಳು ಹೇಳುತ್ತಿದ್ದಾರೆ. ಗ್ರಾಮದಿಂದ ಕೇಂದ್ರದವರೆಗೂ ನಮ್ಮದೇ ಸಕಾರವಿದ್ದರೂ ಒಂದು ಆಕಳು ಉಳಿಸಲು ಆಗುತ್ತಿಲ್ಲ. ಕಾನೂನಿದೆ, ಪೊಲೀಸರಿದ್ದಾರೆ, ಅಧಿಕಾರವಿದೆ. ಆದರೆ ಇಚ್ಛಾಶಕ್ತಿ ಎನ್ನುವುದಿಲ್ಲ. ಆರೇಳು ಬಾರಿ ಸಂಸದರು, ಶಾಸಕರಾದವರು ಇದ್ದಾರೆ. ಆದರೆ ಅವರಿಗೆ ಆಕಳ ರೋಧನೆ ಕೇಳಿಸುತ್ತಿಲ್ಲ, ಅದರ ನೆತ್ತರ ಕಾಣುತ್ತಿಲ್ಲವೇ? ಅದರ ಶಾಪ ತಟ್ಟುತ್ತೆ ಎಂದಿದ್ದಾರೆ.
ಗೋವಾಕ್ಕೆ ಗೋಮಾಂಸ ರಫ್ತಾಗುತ್ತಿರುವುದು ಗೊತ್ತಾಗುತ್ತಿಲ್ಲವೇ? ಹಿಂದೂ ಸಂಘಟನೆಗಳೇ ಹಿಡಿದು ನಾವೇ ಕೇಸು ಹಾಕಿಕೊಂಡು ಜೈಲಿಗೆ ಹೋಗಬೇಕಾ? ಹಾಗಾದರೆ ನೀವ್ಯಾಕಿರೋದು? ಸಗಣಿ ತಿನ್ನೋದಕ್ಕಾ? ಗೋಮಾತೆಯನ್ನ ರಕ್ಷಣೆ ಮಾಡಲು, ಅದರ ನೆತ್ತರ ಹರಿಯುವುದನ್ನು ತಡೆಯಲು ಆಗದಿದ್ದರೆ ದಯವಿಟ್ಟು ಬೇರೆಯವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಮೋದಿ ಹೆಸರಿನಲ್ಲಿ ಗೆದ್ದವರು, ಈ ಬಾರಿ ಮೋದಿ ಹೆಸರಿಲ್ಲದೆ, ಬ್ಯಾನರ್- ಪಾಂಪ್ಲೆಟ್ಸ್ನಲ್ಲಿ ಮೋದಿ ಫೊಟೊ ಇಲ್ಲದೆ, ತಾಕತ್ತಿದ್ದರೆ, ಎದೆ ತಟ್ಟಿ ಅಭಿವೃದ್ಧಿ ಮಾಡಿದ್ದೇನೆ, ಗೋಮಾತೆ ಉಳಿಸಿದ್ದೇನೆ, ಹಿಂದುತ್ವದ ಕೆಲಸ ಮಾಡಿದ್ದೇನೆ ಎಂದು ಮತ ಕೇಳಿ ಎಂದು ಸವಾಲು ಹಾಕಿದ್ದಾರೆ. ಮೋದಿ ಹೆಸರಿನಲ್ಲಿ ಮತ ಪಡೆದವರಿಗೆ ಕಾರ್ಯಕರ್ತರ ಕಷ್ಟ ಗೊತ್ತಾಗಲಿಲ್ಲ. ಕೇಸು ಹಾಕಿಕೊಂಡಿದ್ದು ಗೊತ್ತಾಗಲಿಲ್ಲ. ಛತ್ರಪತಿ ಶಿವಾಜಿಯಂಥೆ ಹೋರಾಡಬೇಕಾದ ಅನಿವಾರ್ಯತೆ ಇಂದಿದೆ ಎಂದಿದ್ದಾರೆ.