ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಅಂಕದ ಕೋಳಿ ಮಾಂಸ ರುಚಿಯಾಗಿರುತ್ತದೆ.ಒಮ್ಮೆ ನಮ್ಮೂರಿಗೆ ಬಂದು ಕೋಳಿ ಅಂಕದ ಮಾಂಸ ತಿನ್ನುವಂತೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿದರು. ಯಕ್ಷಗಾನಕ್ಕೆ ರಾತ್ರಿ ಅನುಮತಿ ನೀಡುವ ವಿಷಯ ಮತ್ತು ಕೋಳಿ ಅಂಕಕ್ಕೆ ಅನುಮತಿ ನೀಡುವ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯಿತು.
ಯಕ್ಷಗಾನವನ್ನು ಸಾರ್ವಜನಿಕವಾಗಿ ನಡೆಸಲು ಅನುಮತಿ ನೀಡಬೇಕು ಎಂದು ಸುನೀಲ್ ಕುಮಾರ ಪ್ರಸ್ತಾಪಿಸಿದರು. ಈ ವೇಳೆ, ಉಡುಪಿಯ ಶಾಸಕರಾದ ಯಶಪಾಲ್ ಸುವರ್ಣ ಹೇಳಿದರು, “ಯಕ್ಷಗಾನ ಮಾತ್ರವಲ್ಲ, ನಮ್ಮಲ್ಲಿ ಕೋಲ, ನೇಮೋತ್ಸವ ಮತ್ತು ನಾಗಮಂಡಲವನ್ನು ಕೂಡಾ ನಡೆಸಲಾಗುತ್ತದೆ. ಹಬ್ಬದ ವೇಳೆ ಕೋಳಿ ಅಂಕ ನಡೆಸಲಾಗುತ್ತಿತ್ತು, ಆದರೆ ಇತ್ತೀಚೆಗೆ ಅದಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಈ ಸಮಸ್ಯೆ ಉಡುಪಿ ಜಿಲ್ಲೆಯಲ್ಲಿ ಇದೆ,” ಎಂದು ಅವರು ಹೇಳಿದರು.
ಈ ಬಗ್ಗೆ ಸ್ಪೀಕರ್ ಖಾದರ್ ಮಾತನಾಡುತ್ತಾ, “ಕೋಳಿ ಅಂಕ ಅನಾದಿ ಕಾಲದಿಂದಲೂ ಧಾರ್ಮಿಕ ಪರಂಪರೆಯಾಗಿ ನಡೆಯುತ್ತಿದೆ. ಆದರೆ ಪ್ರತಿ ಪೊಲೀಸ್ ಠಾಣೆಯ ತನ್ನದೇ ಆದ ಪ್ರಕ್ರಿಯೆಯಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಿ,” ಎಂದು ಸಲಹೆ ನೀಡಿದರು.
ಸುನಿಲ್ ಕುಮಾರ್ ಅವರು ಕೋಳಿ ಅಂಕದ ಕುರಿತು ವಿವರ ನೀಡಿ, “ನಮ್ಮಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆ ನಂತರ ಕೋಳಿ ಅಂಕವನ್ನು ಪರಂಪರೆಯಂತೆ ನಡೆಸಲಾಗುತ್ತದೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಈಗ ಅನುಮತಿ ನೀಡಲಾಗುತ್ತಿಲ್ಲ. ಆದ್ದರಿಂದ ನಮ್ಮ ಕೋಳಿ ಅಂಕದ ಕಡೆ ಗಮನಹರಿಸಿ. ಇದಕ್ಕೆ ಅನುಮತಿ ನೀಡಬೇಕು,” ಎಂದು ಅವರು ಬೇಡಿಕೆ ಇಟ್ಟರು.
ಸತ್ತ ಕೋಳಿಯ ಮಾಂಸ ರುಚಿ
“ಇದು ಜೂಜು ಅಲ್ಲ, ಒಂದು ಪರಂಪರೆ. ಆದರೆ ಕೆಲವು ಅಧಿಕಾರಿಗಳು ಇದಕ್ಕೆ ಅನುಮತಿ ನೀಡುತ್ತಿಲ್ಲ,” ಎಂದು ಸದನದಲ್ಲಿ ಕೆಲವು ಅಧಿಕಾರಿಗಳ ಬಗ್ಗೆ ಕೂಡ ವಿವರಿಸಿದರು. “ಇದರಲ್ಲಿ ಸತ್ತ ಕೋಳಿಯ ಮಾಂಸ ರುಚಿಯಾಗಿರುತ್ತದೆ. ನೀವು ಬಂದ್ರೆ ತೋರಿಸುತ್ತೇನೆ. ಸಾಮಾನ್ಯ ಕೋಳಿ ಮಾಂಸಕ್ಕಿಂತ ಇದರ ರುಚಿ ಚೆನ್ನಾಗಿರತ್ತೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನ ಆಹ್ವಾನಿಸಿದರು.
ಇದನ್ನೂ ಓದಿ