ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದಾರೆ.ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು.ಅವರಿಗೆ 92ವರ್ಷ ವಯಸ್ಸಾಗಿತ್ತು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.
ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಎಸ್.ಎಂ.ಕೃಷ್ಣ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.ಡಾ. ಸತ್ಯನಾರಾಯಣ ಮೈಸೂರು ಮತ್ತು ಡಾ.ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡವು ಅವರಿಗೆ ಚಿಕಿತ್ಸೆಯನ್ನು ನೀಡಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಕೃಷ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ಕರ್ನಾಟಕದ ಹತ್ತನೇ ಮುಖ್ಯಮಂತ್ರಿಯಾಗಿ,ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿಬಾಯಿಸಿ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ್ದ ಎಸ್.ಎಂ.ಕೃಷ್ಣ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿಸಿದ್ದಾರೆ.
ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ ಇಡಲಾಗುವುದು. ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ(ಡಿಸೆಂಬರ್ 11) ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕೃಷ್ಣರ ದೀರ್ಘಕಾಲದ ಒಡನಾಡಿ, ಸಂಬಂಧಿಯೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಮನಿಸಿ