ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಓಸಿ–ಮಟ್ಕಾ ಜೂಜಾಟ, ವ್ಯಕ್ತಿ ನಾಪತ್ತೆ, ಕೆಎಸ್ಆರ್ಟಿಸಿ ಚಾಲಕನ ಮೇಲೆ ಹಲ್ಲೆ, ಬೈಕ್ ಕಳವು ಹಾಗೂ ಅಸ್ವಾಭಾವಿಕ ಸಾವು ಸೇರಿದಂತೆ ಹಲವು ಪ್ರಕರಣಗಳು ವರದಿಯಾಗಿವೆ.
ಕಾರವಾರದಲ್ಲಿ ಮಟ್ಕಾ ದಾಳಿ: ಕಾರವಾರ ನಗರದ ಗಾಂಧಿ ಮಾರ್ಕೆಟ್ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ಟೋಬರ್ 29ರಂದು ಬೆಳಿಗ್ಗೆ 11.30ರ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ ಅಂಕಿ-ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ ಹಾಗೂ 570 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ: ಹೊನ್ನಾವರ ತಾಲೂಕಿನ ಮಂಕಿಯಲ್ಲಿ 56 ವರ್ಷದ ಪ್ರಕಾಶ ಮಂಜುನಾಥ ನಾಯ್ಕ ಎಂಬುವವರು ನಾಪತ್ತೆಯಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅಕ್ಟೋಬರ್ 28ರಂದು ಬೆಳಿಗ್ಗೆ 10.30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ. ಸಂಬಂಧಿಕರ ಮನೆಗಳಲ್ಲಿಯೂ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತ್ನಿ ಗೀತಾ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಎಸ್ಆರ್ಟಿಸಿ ಚಾಲಕನ ಮೇಲೆ ಹಲ್ಲೆ: ದಾಂಡೇಲಿಯಲ್ಲಿ ಕರ್ತವ್ಯ ನಿರತ ಕೆಎಸ್ಆರ್ಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಅಕ್ಟೋಬರ್ 28ರ ರಾತ್ರಿ 8.30ರ ಸುಮಾರಿಗೆ ಕೆಎ-25/ಎಫ್-3663 ಸಂಖ್ಯೆಯ ಬಸ್ನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬಾಮಣಗಿ ಕ್ರಾಸ್ ಬಳಿ ಮೂವರು ವ್ಯಕ್ತಿಗಳು ಚಾಲಕನನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಗನಕೊಪ್ಪ ಬಳಿ ಬೈಕ್ ಕಳವು: ಹಳಿಯಾಳ ತಾಲೂಕಿನ ಜೋಗನಕೊಪ್ಪ–ಅಮ್ಮನಕೊಪ್ಪ ನಡುವಿನ ಪ್ರದೇಶದಲ್ಲಿ ನಿಲ್ಲಿಸಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವಾಗಿದೆ. ಸೆಪ್ಟೆಂಬರ್ 29ರಂದು ಬೆಳಿಗ್ಗೆ 11ರಿಂದ ಸಂಜೆ 5.30ರ ನಡುವಿನ ಅವಧಿಯಲ್ಲಿ ಜಯವಂತ ಯಲ್ಲಪ್ಪ ಮಿರಾಶಿ ಅವರಿಗೆ ಸೇರಿದ ಬೈಕ್ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಜೋಳದ ಕೊಯ್ಲು ಕೆಲಸಕ್ಕೆ ತೆರಳಿದ್ದ ಅವರು ಬೈಕ್ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗದ ಹಿನ್ನೆಲೆಯಲ್ಲಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಭಾಗವತಿ ಬಸ್ ನಿಲ್ದಾಣದಲ್ಲಿ ಮಟ್ಕಾ ದಾಳಿ: ಹಳಿಯಾಳ ತಾಲೂಕಿನ ಭಾಗವತಿ ಬಸ್ ನಿಲ್ದಾಣದ ಪಾಟೀಲ ಎದುರಿನ ರಸ್ತೆಯಲ್ಲಿ ಅಕ್ರಮವಾಗಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ಟೋಬರ್ 28ರಂದು ಸಂಜೆ 5 ಗಂಟೆ ಸುಮಾರಿಗೆ ನಡೆದ ದಾಳಿಯಲ್ಲಿ 530 ರೂ. ನಗದು, ಅಂಕಿ-ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ ಹಾಗೂ ನಾಲ್ಕು ಕಾಗದದ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳಿಯಾಳದಲ್ಲಿ ಬಿಹಾರ ಮೂಲದ ಕಾರ್ಮಿಕ ಸಾವು: ಹಳಿಯಾಳದಲ್ಲಿ ಕಬ್ಬು ಕಡಿಯುವ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಧಾಮು ರಾಮಜೀ ಮಾಂಜಿ (24) ಎಂಬಾತ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಅಕ್ಟೋಬರ್ 29ರಂದು ರಾತ್ರಿ 2.30ರ ಸುಮಾರಿಗೆ ಅಸ್ವಸ್ಥಗೊಂಡಿದ್ದ ಆತನನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತನ ಸಂಬಂಧಿಕರು ತಿಳಿಸಿದ್ದು, ಹಳಿಯಾಳ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

