ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ, ಅಕ್ರಮ ಮದ್ಯ ಮಾರಾಟ, ಮಟ್ಕಾ ಜೂಜಾಟ, ಗಾಂಜಾ ಸೇವನೆ, ಬೆದರಿಕೆ, ಮನೆ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊನ್ನಾವರದಲ್ಲಿ ರಸ್ತೆ ಅಪಘಾತ
ಹೊನ್ನಾವರದ ಕರ್ಕಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮಠದಕೇರಿ ಚರ್ಚ್ ಕ್ರಾಸ್ ಸಮೀಪ ಅಕ್ಟೋಬರ್ 27ರಂದು ಮೋಟಾರ್ ಸೈಕಲ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಆರೋಪಿತ ಬೈಕ್ ಸವಾರ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಬೈಕ್ ಸವಾರನ ಬಲಗಾಲು ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಕಾರಿಗೂ ಹಾನಿಯಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರವಾನಗಿ ಇಲ್ಲದೆ ಮದ್ಯ ಸೇವನೆಗೆ ಅವಕಾಶ
ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಅಕ್ಟೋಬರ್ 28ರಂದು ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸ್ ದಾಳಿಯ ವೇಳೆ ಮದ್ಯದ ಟೆಟ್ರಾ ಪ್ಯಾಕೆಟ್ಗಳು ಹಾಗೂ ಗ್ಲಾಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ರೀತಿಯಾಗಿ ಹಳಿಯಾಳ ತಾಲೂಕಿನ ಹುಲ್ಲಟ್ಟಿ ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಮಂಕಿಯಲ್ಲಿ ಮಟ್ಕಾ ಜೂಜಾಟ
ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬಣಸಾಲೆ ಕೆಪ್ಪನಹಿತ್ಲು ಪ್ರದೇಶದಲ್ಲಿ ಅಕ್ಟೋಬರ್ 28ರಂದು ಅಂಗಡಿಯೊಂದರ ಮುಂದೆ ಸಾರ್ವಜನಿಕರಿಗೆ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಹಣದ ಆಮಿಷವೊಡ್ಡಿ ಪಂಥ ಕಟ್ಟಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ₹595 ನಗದು, ಮಟ್ಕಾ ಸಂಖ್ಯೆಗಳ ಚೀಟಿ ಹಾಗೂ ಬಾಲ್ಪೆನ್ ವಶಪಡಿಸಿಕೊಳ್ಳಲಾಗಿದೆ.
ಶಿರಸಿಯಲ್ಲಿ ಗಾಂಜಾ ಸೇವನೆ ದೃಢ
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಟೋಬರ್ 27ರಂದು ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಕ್ಟೋಬರ್ 28ರಂದು ಬಂದ ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿದ್ದಾಪುರದಲ್ಲಿ ಬೆದರಿಕೆ ಆರೋಪ
ಸಿದ್ದಾಪುರದಲ್ಲಿ ಹಿಂದಿನ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ದೂರುದಾರರಿಗೆ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 19ರಂದು ಫಾಸ್ಟ್ಫುಡ್ ಅಂಗಡಿಯ ಸಮೀಪ ನಿಂತು ಕೂಗಾಡಿ, ಜೀವಕ್ಕೆ ಅಪಾಯ ಉಂಟುಮಾಡುವ ಉದ್ದೇಶದಿಂದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹೆಜನಿಯಲ್ಲಿ ಮನೆ ಕಳ್ಳತನ
ಸಿದ್ದಾಪುರ ತಾಲೂಕಿನ ಹೆಜನಿ ಗ್ರಾಮದ ಬರೆಗುಡ್ಡೆಯಲ್ಲಿ ಅಕ್ಟೋಬರ್ 28ರಂದು ಮನೆಯೊಂದಕ್ಕೆ ನುಗ್ಗಿದ ಅಪರಿಚಿತ ಮೂವರು ಕಳ್ಳರು ಚಿನ್ನಾಭರಣ ಮತ್ತು ನಗದು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿದೆ.ಮನೆಯ ಗೋಡೆ ಹತ್ತಿ ಒಳನುಗ್ಗಿದ ಕಳ್ಳರು ಗೋದ್ರೇಜ್ ಕಪಾಟು ತೆರೆದು, ಅದರಲ್ಲಿದ್ದ ಸುಮಾರು 56 ಗ್ರಾಂ ಚಿನ್ನಾಭರಣ ಹಾಗೂ ₹4,000 ನಗದು ಕಳವು ಮಾಡಿದ್ದಾರೆ ಎನ್ನಲಾಗಿದೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ₹6.34 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಾಂಡೇಲಿಯಲ್ಲಿ ನಿವೇಶನ ವಂಚನೆ ಆರೋಪ
ದಾಂಡೇಲಿ ನಗರದಲ್ಲಿ ಸರ್ಕಾರಿ ಆಶ್ರಯ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ನಿವೇಶನವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ನಿವೇಶನದ ಮಾಲೀಕರನ್ನು ಸಬ್ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಸಹಿ ಮಾಡಿಸಿಕೊಂಡು, ನಿವೇಶನವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಪ್ರತ್ಯೇಕ ಘಟನೆಗಳಲ್ಲಿ ನಾಲ್ವರ ಸಾವು
ಅಂಕೋಲಾದಲ್ಲಿ ಬಸ್ ಕ್ಲೀನರ್ ಸಾವು: ಹೈದರಾಬಾದ್ನಿಂದ ಬರುತ್ತಿದ್ದ ಬಸ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅಕ್ಟೋಬರ್ 28ರಂದು ಬೆಳಿಗ್ಗೆ ಕುಂದಗೋಳ–ಬಾಳೆಗುಳಿ ಕ್ರಾಸ್ ಸಮೀಪ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಹಾರವಾಡ ಬಂದರಿನಲ್ಲಿ ವ್ಯಕ್ತಿ ಸಾವು: ಅಂಕೋಲಾ ತಾಲೂಕಿನ ಹಾರವಾಡ ಬಂದರಿನಲ್ಲಿ ನೀರಿನಲ್ಲಿ ನಿಲ್ಲೇಕಲ್ಲು ಹೆಕ್ಕಲು ಸಮುದ್ರಕ್ಕೆ ಇಳಿದಿದ್ದ ವ್ಯಕ್ತಿಯೊಬ್ಬರು ಅಕ್ಟೋಬರ್ 28ರಂದು ಮಧ್ಯಾಹ್ನ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೊನ್ನಾವರದಲ್ಲಿ ನದಿಯಲ್ಲಿ ಮುಳುಗಿ ಸಾವು: ಹೊನ್ನಾವರದ ಅಂಬಿಗಕೇರಿಯ ರಾಮಚಂದ್ರ ಅಂಬಿಗ ಅವರು ಅಕ್ಟೋಬರ್ 27ರ ಸಂಜೆ ಮತ್ತು ಅಕ್ಟೋಬರ್ 28ರ ಬೆಳಗಿನ ನಡುವಿನ ಅವಧಿಯಲ್ಲಿ ಶರಾವತಿ ನದಿಯಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಶಿರಸಿಯಲ್ಲಿ ಜೇನು ದಾಳಿಗೆ ವೃದ್ಧ ಬಲಿ: ಶಿರಸಿ ತಾಲೂಕಿನ ಹಾವಿನಗದ್ದೆ ಗ್ರಾಮದ 86 ವರ್ಷದ ಗಣಪತಿ ಗೌಡ ಅವರು ಅಕ್ಟೋಬರ್ 28ರಂದು ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸುಮಾರು 50ರಿಂದ 60 ಜೇನುಗಳು ಕಚ್ಚಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

