ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಇಲ್ಲಿನ ಪುರಸಭೆಯವರು 2008-09ನೇ ಸಾಲಿನ ಎಸ್.ಎಫ್.ಸಿ. ಯೋಜನೆಯಡಿ ಪಟ್ಟಣದ ಕೆಲವೆಡೆ ಸ್ಥಳೀಯ ನಾಗರಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿ ಜನರ ದಾಹ ತೀರಿಸುವ ಸತ್ಕಾರ್ಯ ಮಾಡಿದ್ದರು. ಇದೀಗ ಈ ಟ್ಯಾಂಕುಗಳು ರೋಗ ಹರಡುವ ಸೊಳ್ಳೆ ನಿರ್ಮಾಣ ಕೇಂದ್ರಗಳಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕುಮಟಾದ ಹಳೆ ಬಸ್ ನಿಲ್ದಾಣ, ಪಿಕ್ ಅಪ್ ಬಸ್ ನಿಲ್ದಾಣ, ಗಿಬ್ ಸರ್ಕಲ್ ಹಾಗೂ ಮಾಸ್ತಿಕಟ್ಟೆ ಮುಂತಾದೆಡೆ ಈ ಕುಡಿಯುವ ನೀರಿನ ಟ್ಯಾಂಕನ್ನು ಕುಮಟಾ ಪುರಸಭೆಯವರು ನಿರ್ಮಿಸಿದ್ದರು. ಆದರೆ ಇದೀಗ ಇವೆಲ್ಲ ನಿರ್ವಹಣೆ ಇಲ್ಲದೆ ಆಟಕ್ಕಿಲ್ಲ ಲೆಕ್ಕಕ್ಕೆ ಮಾತ್ರ ಎನ್ನುವಂತಾಗಿದೆ.
ಈ ಬಗ್ಗೆ “ಸುದ್ದಿಬಿಂದು” ಜೊತೆ ವಿಶ್ವ ಮಾನವ ಹಕ್ಕು ರಕ್ಷಣೆ, ಕುಮಟಾ ಘಟಕದ ಉಪಾಧ್ಯಕ್ಷರು ಹಾಗೂ ಜೆಡಿಎಸ್ ಪಕ್ಷದ ಮುಖಂಡರೂ ಆಗಿರುವ ವಕ್ಕನಳ್ಳಿಯ ಅಣ್ಣಪ್ಪ ನಾಯ್ಕ ಮಾತನಾಡಿದ್ದು, “ಮಾಸ್ತಿಕಟ್ಟೆಯ ಕುಡಿಯುವ ನೀರಿನ ಘಟಕಕ್ಕೆ ಸ್ಥಳೀಯ ಕಾಲೇಜಿನ ಅನೇಕ ವಿದ್ಯಾರ್ಥಿಗಳು ನಿತ್ಯ ಬರುತ್ತಿದ್ದರು. ಇದೀಗ ನೀರೂ ಇಲ್ಲದೆ, ನಿರ್ವಹಣೆಯೂ ಇಲ್ಲದೆ ಇಲ್ಲಿನ ನೀರಿನ ಘಟಕ ಅಸ್ತವ್ಯಸ್ತ ಆಗಿದೆ. ಈ ಬಗ್ಗೆ ನಾನು ಅನೇಕ ಬಾರಿ ಪುರಸಭೆಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಆದರೆ ದಪ್ಪ ಚರ್ಮದ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈಗ ಪುರಸಭೆಯಲ್ಲಿ ಆಡಳಿತ ಇಲ್ಲದ ಕಾರಣ ಅಧಿಕಾರಿಗಳದ್ದೇ ದರ್ಬಾರ್ ಆಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗಾದರೆ ಕಷ್ಟ. ನಾಗರಿಕರು ಎಲ್ಲದಕ್ಕೂ ಪ್ರತಿಭಟನೆಯ ಹಾದಿ ಹಿಡಿಯುವ ಅನಿವಾರ್ಯತೆ ಸೃಷ್ಟಿಯಾಗಬಾರದು. ಮಾಸ್ತಿಕಟ್ಟೆಯ ನೀರಿನ ಘಟಕವನ್ನು ಅಂದು ಶಾಸಕರಾಗಿದ್ದ ದಿನಕರ ಶೆಟ್ಟಿಯವರು ಉದ್ಘಾಟಿಸಿದ್ದರು. ಈಗಲೂ ಅವರೇ ಶಾಸಕರಿದ್ದಾರೆ. ಶಾಸಕರು ಅವಕಾಶ ಸಿಕ್ಕಾಗ ಸಾಮಾನ್ಯ ಜನರಿಗೆ ಅನುಕೂಲವಾಗುವ, ಜನರ ದಾಹ ತಣಿಸುವ ಕೆಲಸವನ್ನು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್ ಇಲ್ಲ ಅಂದ್ರೆ ಚಿಕಿತ್ಸೆ ನಿರಾಕರಿಸುವಂತಿಲ್ಲ: ಡಿಎಚ್ಓ ಸೂಚನೆ




