ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಪೀಕ್ಳೆ ನರ್ಸಿಂಗ್ ಹೋಮ್ನ ವೈದ್ಯರೊಬ್ಬರು ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.
ರಾಜು ಪೀಕ್ಳೆ ಎಂಬುವವರೆ ಆತ್ಮಹತ್ಯೆ ಮಾಡಿಕೊಂಡ ವೈದ್ಯರಾಗಿದ್ದಾರೆ. ಅವರು ಅವರ್ಸಾದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಸುಮಾರು ಹದಿನೈದು ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ರಾಜು ಪೀಕ್ಳೆ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಪರಿಚಿತ ರೋಗಿಯ ಸಂಬಂಧಿಯೊಬ್ಬರು ಚಿಕಿತ್ಸೆ ವೇಳೆ ಹಿಡ್ಡನ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಎನ್ನಲಾಗಿದೆ.
ಈ ವಿಡಿಯೋ ವೈರಲ್ ಆದ ಬಳಿಕ ವೈದ್ಯ ರಾಜು ಪೀಕ್ಳೆ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹಾಗೂ ಆಪ್ತರು ತಿಳಿಸಿದ್ದಾರೆ. ವಿಡಿಯೋ ವಿಚಾರವಾಗಿ ಇದು ಕಣ್ತಪ್ಪಿನಿಂದ ಉಂಟಾದ ಸಮಸ್ಯೆ ಎಂದು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.
ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಟೀಕೆ, ಮಾನಸಿಕ ಒತ್ತಡ ಹಾಗೂ ಅವಮಾನದಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಘಟನೆಯ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ವೈದ್ಯರ ಆತ್ಮಹತ್ಯೆ ಘಟನೆ ವೈದ್ಯಕೀಯ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.
ಇದನ್ನೂ ಓದಿ/ಹೆದ್ದಾರಿ ಬದಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ :ಗ್ರಾಮೀಣ ಪ್ರದೇಶದ ಅಂಗಡಿ, ಮನೆಗಳೇ ಟಾರ್ಗೆಟ್


