ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲೇ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

ಈ ಸಂಬಂಧ ಸರಕಾರ ಇದೀಗ ಅಧಿಕೃತ ಆದೇಶ ಹೊರಡಿಸಿದೆ.ರಾಮಚಂದ್ರ ರಾವ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆಯಿಂದ ವರದಿ ಕೇಳಿದ್ದರು. ವರದಿ ಸಲ್ಲಿಕೆಯ ಬಳಿಕ ತಕ್ಷಣ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ರಾಮಚಂದ್ರ ರಾವ್, “ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇದು ಸುಳ್ಳು ಆರೋಪ” ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿನ್ನ ಸಾಗಾಣೆ ಪ್ರಕರಣದಲ್ಲಿ ಬಂಧನಗೊಂಡಿರುವ ನಟಿ ರನ್ಯಾ ರಾವ್ ಅವರ ಮಲತಂದೆಯೇ ಈ ರಾಮಚಂದ್ರ ರಾವ್. ಈ ಹಿಂದೆ ರನ್ಯಾ ರಾವ್ ಪ್ರಕರಣದಲ್ಲಿ ಬೆಂಬಲ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರು ಅಮಾನತುಗೊಂಡಿದ್ದರು. ನಂತರ ತನಿಖೆಯಲ್ಲಿ ಕ್ಲೀನ್ ಚೀಟ್ ಸಿಕ್ಕ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿತ್ತು.

ಆದರೆ ಇದೀಗ ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಮತ್ತೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ/ಪೊಲೀಸ್ ಕಚೇರಿಯಲ್ಲೇ ಕಾಮಕಾಂಡ..! ಉನ್ನತ ಅಧಿಕಾರಿಯ ರಾಸಲೀಲೆ ವಿಡಿಯೋ ವೈರಲ್