ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಇಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಭೇಟಿ ನೀಡಿ, ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಭಟ್ಕಳ ತಾಲೂಕಿನ ಮಂಕಿ ಗ್ರಾಮದ ಸುಬ್ರಾಯ ಮಂಜುನಾಥ ನಾಯ್ಕ ಅವರ 7 ವರ್ಷದ ಪುತ್ರ ಪ್ರಮೋದ ಸುಬ್ರಾಯ ನಾಯ್ಕ ಅವರ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಸ್ಥಿತಿಗತಿಯ ಕುರಿತು ಸಚಿವರು ವೈದ್ಯಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ನಡೆಯುತ್ತಿರುವ ಚಿಕಿತ್ಸಾ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಈ ವೇಳೆ ಬಾಲಕನ ತಂದೆ–ತಾಯಿಗೆ ಧೈರ್ಯ ತುಂಬಿ, ಎಲ್ಲ ರೀತಿಯ ಸಹಾಯ ನೀಡುವ ಭರವಸೆ ನೀಡಿದರು.
ಈಗಾಗಲೇ ಬಾಲಕನ ಚಿಕಿತ್ಸೆಗೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ನೆರವನ್ನು ಸಚಿವ ಮಂಕಾಳ್ ವೈದ್ಯ ಅವರು ಒದಗಿಸಿದ್ದು, ಮುಂದುವರಿದ ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದಲೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡಲಾಗುವುದಾಗಿ ಭರವಸೆ ನೀಡಿದರು.
ಬಾಲಕ ಶೀಘ್ರವಾಗಿ ಗುಣಮುಖನಾಗಲಿ ಎಂದು ಹಾರೈಸಿದ ಸಚಿವರು, ಅಗತ್ಯವಿರುವ ಎಲ್ಲ ವೈದ್ಯಕೀಯ ಹಾಗೂ ಆರ್ಥಿಕ ಸಹಾಯವನ್ನು ಸರ್ಕಾರದ ಮಟ್ಟದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.


