
ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ಸುಬ್ರಾಯ ಮಂಜಯ್ಯ ನಾಯ್ಕ ಅವರ ಏಳು ವರ್ಷದ ಪುತ್ರ ಪ್ರಮೋದ್ ನಾಯ್ಕ ಗಂಭೀರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಹೃದಯ ಕಸಿ ಸೇರಿದಂತೆ ಸಂಪೂರ್ಣ ಚಿಕಿತ್ಸೆಗೆ 40 ಲಕ್ಷಕ್ಕೂ ಅಧಿಕ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದು, ಹಿನ್ನೆಲೆಯಲ್ಲಿ, ಕಡು ಬಡತನದಲ್ಲಿರುವ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಈ ಹಿನ್ನೆಲೆ ಬಾಲಕನ ಚಿಕಿತ್ಸೆಗೆ ಸಹಾಯ ಸಂಗ್ರಹಿಸಲು ಸ್ಥಳೀಯ ಯುವಕರು ಕ್ರೌಡ್ ಫಂಡಿಂಗ್ಗೆ ಮುಂದಾಗಿದ್ದ ಸಂದರ್ಭದಲ್ಲಿ, ಹೊನ್ನಾವರಕ್ಕೆ ಆಗಮಿಸಿದ್ದ ಸಚಿವ ಮಂಕಾಳ ವೈದ್ಯರು ಅಕಸ್ಮಿಕ ಭೇಟಿ ನೀಡಿದರು. ಬಾಲಕನ ಅನಾರೋಗ್ಯ ಹಾಗೂ ಕುಟುಂಬದ ದುಸ್ಥಿತಿಯ ಮಾಹಿತಿ ಪಡೆದ ಸಚಿವರು ತಕ್ಷಣ ಸ್ಪಂದಿಸಿ, ಬಾಲಕನ ಚಿಕಿತ್ಸೆಗೆ 5 ಲಕ್ಷ ನೆರವು ನೀಡುವುದಾಗಿ ಘೋಷಿಸಿದರು. ಈ ನೆರವನ್ನು ತಮ್ಮ ಪುತ್ರಿ ಬೀನಾ ವೈದ್ಯ ಅವರ ಮೂಲಕ ತಕ್ಷಣವೇ ಕುಟುಂಬಕ್ಕೆ ನೀಡಿದ್ದಾರೆ.
ಸಚಿವ ಮಂಕಾಳ ವೈದ್ಯರು ತೋರಿದ ಮಾನವೀಯತೆ ಹಾಗೂ ಕಾಳಜಿಗೆ ಮಂಕಿ ಗ್ರಾಮದ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.ಇದೇ ವೇಳೆ, “ನಮ್ಮದೇ ಊರಿನ ಏಳು ವರ್ಷದ ಮಗುವಿನ ಜೀವ ಉಳಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪ್ರತಿ ಕುಟುಂಬವು ಸಾಧ್ಯವಾದಷ್ಟು ಕೈಲಾದಷ್ಟು ಮೊತ್ತವನ್ನು ನೀಡುವ ಮೂಲಕ ಬಾಲಕನ ಚಿಕಿತ್ಸೆಗೆ ಸಹಕಾರ ನೀಡಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


