ಸುದ್ದಿಬಿಂದು ಬ್ಯೂರೋ ವರದಿ
ಚಿತ್ರದುರ್ಗ : ಮದುವೆ ನಿಶ್ಚಯವಾಗಿ, ಕುಟುಂಬದಲ್ಲಿ ಸಡಗರ ಮನೆಮಾಡಿದ್ದ ಕ್ಷಣಗಳಲ್ಲೇ ವಿಧಿಯಾಟಕ್ಕೆ ಯುವತಿಯ ಜೀವ ಕಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ ಬಸ್ ಬೆಂಕಿ ದುರಂತದಲ್ಲಿ ಅಂತ್ಯವಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಮಾನಸ ಅವರು ಗೋಕರ್ಣ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರು ಐಟಿ ಕಂಪನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಮಾನಸ ಅವರು ನಗರದ ಪಿಜಿಯಲ್ಲಿ ವಾಸವಾಗಿದ್ದರು. ಕೆಲವೇ ದಿನಗಳ ಹಿಂದಷ್ಟೆ ಮದುವೆ ನಿಶ್ಚಿತವಾಗಿತ್ತು, ಮಗಳ‌‌ ಮದುವೆಗಾಗಿ ಕುಟುಂಬಸ್ಥರು ಆಭರಣಗಳ ಖರೀದಿಯನ್ನೂ ಮಾಡಿಕೊಂಡಿದ್ದರು. ಮದುವೆಗೆ ಮುನ್ನ ಸ್ನೇಹಿತರೊಂದಿಗೆ ಪ್ರವಾಸ ಹೋಗಿದ್ದ ಮಾನಸ ಅವರ ಕನಸುಗಳು ಅಪಘಾತದಲ್ಲಿ ಅಂತ್ಯಗೊಂಡಿವೆ.

ಮಾನಸ ಅವರ ಐಡಿಯಿಂದ ನಾಲ್ವರಿಗೆ ಟಿಕೆಟ್ ಬುಕ್ ಆಗಿದ್ದು, ಸ್ನೇಹಿತರಾದ ನವ್ಯಾ, ಮಿಲನ ಹಾಗೂ ಅಭಿಷೇಕ್ ಜೊತೆಗೂಡಿ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದರು. ಈ ದುರಂತದಲ್ಲಿ ರಶ್ಮಿ ಹಾಗೂ ನವ್ಯಾ ಎಂಬವರೂ ಮೃತಪಟ್ಟಿರುವುದು ದೃಢಪಟ್ಟಿದೆ.
ಅಪಘಾತದ ಬಳಿಕ ಬಸ್‌ಗೆ ಬೆಂಕಿ ಹೊತ್ತಿಕೊಂಡಾಗ ಕೆಲ ಪ್ರಯಾಣಿಕರು ಬಸ್‌ನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಇಬ್ಬರು ಪ್ರಯಾಣಿಕರು ಬಸ್‌ನಿಂದ ಜಿಗಿಯುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ ಆಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಟಿಕೆಟ್ ಬುಕ್ ಮಾಡಿಕೊಂಡಿದ್ದ ಪ್ರಯಾಣಿಕರ ಜೊತೆಗೆ ಮಾರ್ಗ ಮಧ್ಯೆ ಬಸ್ ಹತ್ತಿದ್ದ ಇಬ್ಬರೂ ಬಸ್‌ನಲ್ಲಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ