ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಪಷ್ಟವಾಗಿ ಹೇಳಿದರು.

ಈ ಬಗ್ಗೆ ಆಂಗ್ಲೆ ಗ್ರಾಮದಲ್ಲಿ ಸಚಿವ ಮಂಕಾಳ್ ವೈದ್ಯ ಅವರು ಪ್ರತಿಕ್ರೀಯೆ ನೀಡಿದ್ದಾರೆ, ಸಿಎಂ ಅವರು ಅಲ್ಲ ಎಂದರೆ ಹೇಳಲು ನಾವು ಯಾರು? ಹೌದು ಎಂದರೆ ಹೇಳಲು ನಾವ್ಯಾರು? ನಮಗೆ ಹೈಕಮಾಂಡ್ ಇದೆ. ಅಂತಿಮ ತೀರ್ಮಾನ ಹೈಕಮಾಂಡ್‌ದ್ದೇ” ಎಂದು ಹೇಳಿದರು. ಯಾರೇ ಬದಲಾಗಬೇಕಾದರೂ ಹೈಕಮಾಂಡ್ ತೀರ್ಮಾನಿಸಿದಂತೆ ಎಲ್ಲವೂ ನಡೆಯುತ್ತದೆ ಎಂದು ಅವರು ಪುನರುಚ್ಚರಿಸಿದರು.

ತಾವು ಮತ್ತು ತಮ್ಮ ಪಕ್ಷದವರು ದೇವರನ್ನು ನಂಬಿ ಕೆಲಸ ಮಾಡುವ ಭಕ್ತರು ಎಂದು ಹೇಳಿದ ಸಚಿವರು, “ನಮ್ಮ ನಂಬಿಕೆ ದೇವರ ಆಶೀರ್ವಾದ ನಮ್ಮ ಮೇಲೆ ಇರಬೇಕು, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ನಮಗಿದೆ. ಆದರೆ ಬಿಜೆಪಿಗರು ರಾಜಕೀಯಕ್ಕೆ ದೇವರನ್ನು ಬಳಸುವವರು” ಎಂದು ಟೀಕಿಸಿದರು.

ಸತೀಶ್ ಜಾರ್ಕಿಹೊಳಿ ಅವರ ಊರಲ್ಲಿ ನಡೆಯುತ್ತಿರುವ ಅಧಿವೇಶನದ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಎಂದು ಅವರು ಎಲ್ಲರನ್ನೂ ಆಹ್ವಾನಿಸಿದ್ದರು. ಅದರಲ್ಲಿ ಕೆಲವರು ಹೋಗಿದ್ದಾರೆ ಕೆಲವರು ಹೋಗಿಲ್ಲ.. ಇದರಲ್ಲಿ ಯಾವುದೇ ‘ಡಿನ್ನರ್ ಪಾಲಿಟಿಕ್ಸ್’ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನಾವು ರೆಸಾರ್ಟ್, ಡಿನ್ನರ್ ಪಾರ್ಟಿ ರಾಜಕಾರಣ ಮಾಡುವವರಲ್ಲ. ಊಟಕ್ಕೆ ಕರೆದರೆ ಅದನ್ನು ರಾಜಕೀಯ ಹೇಗೆ ಆಗತ್ತೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ ಮಂಕಾಳು ವೈದ್ಯ, “ಬಿಜೆಪಿಗರು ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿ ಮಾಡಿದರು. ವಿಜಯೇಂದ್ರ ಅವರ ಅಪ್ಪನನ್ನೇ ಸಿಎಂ ಸ್ಥಾನದಲ್ಲಿ ಕೂರಿಸಲು ಬಿಡಲಿಲ್ಲ. ಇಂಥವರು ನಮಗೆ ಪಾಠ ಹೇಳುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ವಿಚಾರದಲ್ಲಿ, ಹೈಕಮಾಂಡ್ ಈಗಾಗಲೇ ನಿರ್ಧಾರ ಮಾಡಿದ್ದು, ಅದರಂತೆ ಎಲ್ಲವೂ ನಡೆಯಲಿದೆ.ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.

ಇದನ್ನೂ ಓದಿ/ ಸಿಎಂ ಸ್ಥಾನದ ಕುರಿತು ಒಪ್ಪಂದ ಆಗಿದೆ : ಡಿಕೆ ಶಿವಕುಮಾರ ಹೊಸ ಬಾಂಬ್