ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಉತ್ತರಕನ್ನಡ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು ಗೆಲುವಿಗಾಗಿ ಎರಡು ಬಣಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಸ್ಥಾನದ ಗೆಲುವು ರಾಜಕೀಯ ನಾಯಕರ ಘನತೆಯ ಪ್ರಶ್ನೆಯಾಗಿದ್ದು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇರವಾಗೇ ಅಖಾಡಕ್ಕೆ ಧುಮುಕಿದ್ದರಿಂದ ಚುನಾವಣಾ ಕಾವು ಜೋರಾಗಿದೆ. ಈ ಹಿಂದೆ ದೋಸ್ತ್’ಗಳಾಗಿದ್ದವರೇ ಗೆಲುವಿಗಾಗಿ ತೊಡೆ ತಟ್ಟಿ ನಿಂತಿದ್ದು ಕದನ ಕಣ ರಂಗೇರಿದೆ..
ಇದು ಶಾಸಕ ಸ್ಥಾನದ ಎಲೆಕ್ಷನ್ ಅಲ್ಲದಿದ್ದರೂ ಅಷ್ಟೇ ಮಹತ್ವ ಪಡೆದಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆ.. ಜಿಲ್ಲೆಯ ರಾಜಕಾರಣಿಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ.. ಜಿಲ್ಲೆಯಲ್ಲಿ ತಮ್ಮ ಪ್ರಭಾವ, ಹಿಡಿತ ಎಷ್ಟಿದೆ ಎನ್ನುವುದರ ಪ್ರಶ್ನೆ.. ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಅಖಾಡ ಸಜ್ಜಾಗಿದೆ.. ಕದನ ಕಣ ರಂಗೇರತೊಡಗಿದೆ.. ಯಾರ ಮತ ಯಾವ ಬಣಕ್ಕೆ ಎನ್ನುವ ಲೆಕ್ಕಾಚಾರಗಳು ಜೋರಾಗತೊಡಗಿವೆ..
ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ನೇರವಾಗಿ ಪೈಪೋಟಿಗೆ ಇಳಿದಿದ್ದಾರೆ..ತೊಡೆ ತಟ್ಟಿ ಸಮರ ಸಾರಿದ್ದಾರೆ.. ಹೀಗಾಗಿ ಎರಡು ಬಣಗಳ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ.ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.. ಹಾಗಾದ್ರೆ ಹುರಿಯಾಳುಗಳ ಸಪೋರ್ಟ್ ಯಾವ ಬಣಕ್ಕೆ.ಮತದಾರರನ್ನ ತಮ್ಮ ಕಡೆ ಒಲಿಸಿಕೊಳ್ಳಲು ಘಟಾನುಗಟುಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಬಿಜೆಪಿಯಿಂದ ಉಚ್ಛಾಟಿತರಾಗಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಸೋಲಿಸಲು ಬಿಜೆಪಿ ಬೆಂಬಲಿತರು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಜತೆ ಕೈ ಜೋಡಿಸಿದ್ದಾರೆ. ಇನ್ನು ಕಳೆದ ಬಾರಿ ಹೆಬ್ಬಾರ್ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಸಹಕಾರ ಭಾರತಿ ಈ ಬಾರಿ ಅವರ ವಿರುದ್ಧವಿದ್ದು ಸಚಿವ ವೈದ್ಯ ಜತೆ ನಿಂತಿದ್ದಾರೆ.
ಸದ್ಯದ ವಿಶ್ಲೇಷಣೆ ಪ್ರಕಾರ ಪ್ಯಾಕ್ಸ್ ಅಂದರೆ ಕೃಷಿ ಪತ್ತಿನ ಕ್ಷೇತ್ರದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಮೇಲುಗೈ ಸಾಧಿಸಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಉಳಿದಂತೆ ವಿವಿಧ ಪ್ರತಿನಿಧಿಗಳ ಕ್ಷೇತ್ರದಲ್ಲಿ ಸಚಿವ ವೈದ್ಯರ ತಂಡದ ಶಕ್ತಿ ಹೆಚ್ಚಿದ್ದಂತೆ ಕಂಡುಬಂದಿದೆ..16 ಸ್ಥಾನಗಳ ಪೈಕಿ 10 ಕ್ಕೂ ಅಧಿಕ ಸ್ಥಾನವು 50:50 ಅನುಪಾತದಲ್ಲಿದ್ದು ಮತದಾರನ್ನು ಒಲೈಸಲು ಯಾರು ಸಕ್ಸಸ್ ಆಗ್ತಾರೆ ಎಂಬುದೇ ಸದ್ಯದ ಕುತೂಹಲ. ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವೀಕೃತಗೊಂಡಿದ್ದ 44 ನಾಮಪತ್ರಗಳ ಪೈಕಿ 11 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ 33 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಆದರೆ ಹೆಬ್ಬಾರ್ ಬಣದಿಂದ ಭಟ್ಕಳ ಕ್ಷೇತ್ರದಲ್ಲಿ ಯಾರೂ ಸ್ಪರ್ಧಿಸದ ಕಾರಣ ಸಚಿವ ವೈದ್ಯ ಹಾಗೂ ವೈದ್ಯ ಬಣದ ವಿ.ಕೆ.ವಿಶಾಲ ಹೊನ್ನಾವರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಹೆಬ್ಬಾರ್ ಬಣದ ಬೀರಣ್ಣ ಬೊಮ್ಮಯ್ಯ ನಾಯಕ್ ಅಂಕೋಲಾದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಡಿಸಿಸಿ ಬ್ಯಾಂಕಿನ ಒಟ್ಟು 16 ನಿರ್ದೇಶಕ ಸ್ಥಾನಗಳಲ್ಲಿ 11 ತಾಲೂಕಿನ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಗಳಿದ್ದರೆ 5 ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿದ್ದಾರೆ. ಇದರಲ್ಲಿ ಹೆಬ್ಬಾರ್ ಟೀಮ್ 15 ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದು ಇನ್ನೂ ಸಚಿವ ವೈದ್ಯ ಬಣದಿಂದ 13 ಅಭ್ಯರ್ಥಿಗಳು ಸೆಣಸಲಿದ್ದಾರೆ. ಈಗಾಗಲೇ 3 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆದ್ದಿರೋದ್ರಿಂದ 12 ಸ್ಥಾನಗಳಿಗೆ 30 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಅಂದಹಾಗೆ ಶಿರಸಿ ಪ್ಯಾಕ್ಸ್‌ನಲ್ಲಿ 27 ಮತಗಳು (ಅನರ್ಹ1), ಸಿದ್ದಾಪುರ 23 (ಅನರ್ಹ1), ಯಲ್ಲಾಪುರ 15 (ಅನರ್ಹ1), ಮುಂಡಗೋಡನಲ್ಲಿ 13, ಹಳಿಯಾಳದಲ್ಲಿ 13, ಜೋಯಿಡಾದಲ್ಲಿ 09 (ಅನರ್ಹ2), ಕುಮಟಾದಲ್ಲಿ 16, ಹೊನ್ನಾವರ 19 (ಅನರ್ಹ2), ಅಂಕೋಲಾ 14, ಭಟ್ಕಳ 7, ಕಾರವಾರ 9 (ಅನರ್ಹ4), ಮಾರ್ಕೆಟಿಂಗ್ ಕ್ಷೇತ್ರದಲ್ಲಿ 11, ಗ್ರಾಹಕರ ಸಂಸ್ಕರಣ ಮತ್ತು ಸಹಕಾರ ಸಂಸ್ಕರಣ ಕ್ಷೇತ್ರದಲ್ಲಿ 21 (ಅನರ್ಹ16), ಔದ್ಯೋಗಿಕ 22 (ಅನರ್ಹ7), ಸೌಹಾರ್ದ ಮತ್ತು ಅರ್ಬನ್ 211 (ಅನರ್ಹ62), ಹಾಲು ಒಕ್ಕೂಟ 203 (ಅನರ್ಹ33) ಮತಗಳಿವೆ.
ಯಲ್ಲಾಪುರ ಮತ್ತು ಮುಂಡಗೋಡಿನಲ್ಲಿ ಹೆಬ್ಬಾರ್ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದ್ದು ಹಳಿಯಾಳದಲ್ಲಿ ಎಸ್.ಎಲ್.ಘೋಟ್ನೇಕರ್ ಗೆಲುವು ನಿಚ್ಚಳವಾಗಿದೆ. ಇನ್ನುಳಿದ 10 ಕ್ಷೇತ್ರಗಳಲ್ಲಿ ನೇರ ಹಣಾಹಣಿಯಿದ್ದು ಅಲ್ಲಿ ಕೆಡಿಸಿಸಿ ಚುಕ್ಕಾಣಿ ಹಿಡಿಯುವವರ ಭವಿಷ್ಯ ನಿರ್ಧಾರವಾಗಲಿದೆ.ಇನ್ನು ರಾಜಕೀಯ ದೃಷ್ಟಿಯಿಂದ ನೋಡುವುದಾದರೆ ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಹೆಜ್ಜೆ ಇಡುತ್ತಿರುವ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಬರೋದು ಮಂಕಾಳು ವೈದ್ಯ ಸೇರಿದಂತೆ ಶಾಸಕರಾದ ಆರ್.ವಿ.ದೇಶ್‌ಪಾಂಡೆ, ಭೀಮಣ್ಣ ನಾಯ್ಕ್ ಅವರಿಗೆ ಸ್ವಲ್ಪವೂ ಇಷ್ಟವಿಲ್ಲ. ಕ್ಷೇತ್ರದಲ್ಲಿ ಹೆಬ್ಬಾರ್ ವರ್ಚಸ್ಸನ್ನು ಕಡಿಮೆಗೊಳಿಸುವುದು ಕಾಂಗ್ರೆಸ್ ನಾಯಕರ ಪ್ಲಾನ್.. ಈ ನಡುವೆ ಕಾರವಾರ ಶಾಸಕ ಸತೀಶ್ ಸೈಲ್ ಕೂಡಾ ಕಾರವಾರ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಬಿಜೆಪಿಯ ಬೆಂಬಲದೊಂದಿಗೆ ಸಚಿವ ಮಂಕಾಳು ವೈದ್ಯ ಶಾಸಕ ಶಿವರಾಮ ಹೆಬ್ಬಾರ್’ರನ್ನು ಕಟ್ಟಿಹಾಕಲು ಠಕ್ಕರ್ ನೀಡುತ್ತಿದ್ದಾರೆ. ಆದರೆ ಮತದಾರರ ಒಲವು ಯಾವಕಡೆ ಇದೆ ಎನ್ನುವುದು IMPORTENT. ಒಟ್ಟಾರೆ ನಾಳೆ ನಡೆಯುವ ಕೆಡಿಸಿಸಿ ಬ್ಯಾಂಕ್ ಹೈವೋಲ್ಟೇಜ್ ಚುನಾವಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.. ಮುಂದಿನ ದಿನಗಳಲ್ಲಿ ಹೆಬ್ಬಾರ್ ಅಧ್ಯಕ್ಷ ಸ್ಥಾನಕ್ಕೇರುತ್ತಾರಾ.? ಅಥವಾ ನೂತನ ಅಧ್ಯಕ್ಷರಾಗಿ ಮಂಕಾಳು ವೈದ್ಯ ಪಟ್ಟ ಅಲಂಕರಿಸುತ್ತಾರಾ.? ಎಂಬುದನ್ನ ಕಾದು ನೋಡಬೇಕಿದೆ..
ಇದನ್ನೂ ಓದಿ/ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಸದ್ದು : ಮಹಿಳೆಯರ ಕಿಡಿ !

