ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಈಗ ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಳಿಗೆಗಳು ಆರಂಭವಾಗುತ್ತಿದ್ದು, ಒಂದೇ ಕಡೆ ಎಲ್ಲಾ ಬ್ರಾಂಡ್‌ಗಳ ಬಟ್ಟೆಗಳು ದೊರೆಯುತ್ತಿವೆ. ಆದರೆ, ಕೆಜಿ ಬಟ್ಟೆ ಮಾರಾಟಗಾರರ ಮೇಲೆಯೇ ಗ್ರಾಹಕರು ಅನುಮಾನು ಪಡುವಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ…
ಈ ಮೊದಲು ಇಂಥ ಬಟ್ಟೆಗಳನ್ನು ಖರೀದಿಸಿದ ಕೆಲವರು ತಮ್ಮ ಕೆಟ್ಟ ಅನುಭವಗಳನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. “ಶ್ರೀಮಂತರ ಮನೆಗಳಲ್ಲಿ ಬಳಸಿ ಬಿಸಾಡಿದ ಬಟ್ಟೆಗಳು, ಅಪಘಾತದಲ್ಲಿ ಸಾವಿಗೀಡಾದವರ ಬಟ್ಟೆಗಳು, ಅನಾಥಾಶ್ರಮದ ಹೆಸರಿನಲ್ಲಿ ಮನೆ ಮನೆಗಳಿಂದ ಸಂಗ್ರಹಿಸಿದ ಹಳೆಯ ಬಟ್ಟೆಗಳು—ಇವನ್ನೆಲ್ಲಾ ತಂದು ಮರುಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ” ಎಂಬ ಆರೋಪ ಕೇಳಿ ಬರುತ್ತಿದೆ.
ಮಹಾನಗರಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ಸಾವಿಗೀಡಾದವರ ಮೈಮೇಲಿದ್ದ ಬಟ್ಟೆಗಳನ್ನು ತೊಳೆದು ಚೆನ್ನಾಗಿ, ಇಸ್ತ್ರಿ ಮಾಡಿ, ನೂತನ ಟ್ಯಾಗ್ ಅಂಟಿಸಿ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ ಎಂಬ ರೀತಿಯ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಜನರು ಹೇಳುವಂತೆ – “ನಂಬಿಗಸ್ತ ಖಾಯಂ ಮಳಿಗೆಗಳಲ್ಲಿ ಖರೀದಿ ಮಾಡಿದರೆ ಮರುದಿನ ಹೋಗಿ ಪ್ರಶ್ನಿಸಬಹುದು. ಆನ್‌ಲೈನ್‌ನಲ್ಲಿ ತೆಗೆದುಕೊಂಡರೂ ಇಷ್ಟವಾಗದಿದ್ದರೆ ಮರಳಿಸಲು ಅವಕಾಶವಿದೆ. ಆದರೆ, ನಾಲ್ಕು ದಿನ ಮಾತ್ರ ಸೇಲ್–ಸೇಲ್ ಎಂದು ಕೂಗುತ್ತಾ ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಾಡಿ, ನಂತರ ಊರು ಬಿಟ್ಟು ಓಡಿ ಹೋಗುವವರನ್ನು ನಂಬಿ ಬಟ್ಟೆ ಖರೀದಿ ಮಾಡಿದ್ದರೆ ಮುಂದೇ ಏನು ಕಥೆ. ಇವರು ನಾಲ್ಕು ದಿನ ಒಂದು ಜಿಲ್ಲೆಯಲ್ಲಿ ಇದ್ದರೆ ಮುಂದೆ ರಾಜ್ಯವನ್ನೆ ಬಿಟ್ಟು ಬೇರೆ ಜಿಲ್ಲೆಗೆ ಪರಾರಿಯಾಗುತ್ತಾರೆ ಎನ್ನಲಾಗಿದೆ..
ಒಂದು ವಿಡಿಯೋ ಕಾಮೆಂಟ್‌ನಲ್ಲಿ ಮಹಿಳೆಯೊಬ್ಬರು “ಕೆಜಿಗೆ 700 ರೂ. ಕೊಟ್ಟು ಬಟ್ಟೆ ಖರೀದಿಸಿದ್ದಾಗ ನನಗೂ ಕೆಟ್ಟ ಅನುಭವವಾಯಿತು” ಎಂದು ಹೇಳಿದರೆ, ಇನ್ನೊಬ್ಬರು ಅವರು “ಸೆಕೆಂಡ್ ಸೆಲ್ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇದರ ನಡುವೆ, ಕೆಲವರು “ಪ್ರಚಾರಕ್ಕಾಗಿ ಕೆಲ ಕಂಪನಿಗಳು ಕಡಿಮೆ ದರದಲ್ಲಿ ಬಟ್ಟೆ ಮಾರಾಟ ಮಾಡುತ್ತವೆ. ಬೆಂಗಳೂರು ಸೇರಿ ಹಲವೆಡೆ ಇಂಥ ಕಂಪನಿಗಳಿವೆ. ಆದರೆ ಅಲ್ಲಿ ಒಂದೇ ಬ್ರಾಂಡಿನ ಬಟ್ಟೆಗಳು ಸಿಗುತ್ತವೆ. ಎಲ್ಲ ಬ್ರಾಂಡ್‌ಗಳ ಬಟ್ಟೆಗಳು ಒಂದೇ ಕಡೆ ಬೊಗಸೆ ತುಂಬಿ ಕೊಡುವುದು ಅನುಮಾನಕ್ಕೆ ಕಾರಣ” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..