ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ತಾಲೂಕಿನ ಅತೀ ದೂರದ ಕರ‍್ಗಾವ್ ಗ್ರಾಮದಲ್ಲಿ ಇಂಟರ್ನೆಟ್ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸವಾಲು ಎದುರಾಗಿದ್ದು. ಈ ತೊಂದರೆಯನ್ನು ನಿವಾರಿಸಲು ಕಂದಾಯ ಇಲಾಖೆ ಗೋವಾ ರಾಜ್ಯದ ಸಮೀಪದ ನೇತ್ರಾವಳಿ ಗ್ರಾಮದಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.

ಕರ‍್ಗಾವ್ ಗ್ರಾಮವು ಕಾರವಾರ ತಾಲೂಕು ಕೇಂದ್ರದಿಂದ ಸುಮಾರ 70 ಕಿಲೋಮೀಟರ್ ದೂರವಿದ್ದು,ಗೋವಾ ಗಡಿಯ ಅರಣ್ಯ ಪ್ರದೇಶದಲ್ಲಿದೆ. ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಗಂಭೀರವಾಗಿದೆ – ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿವೆ, ಮೊಬೈಲ್ ನೆಟ್ವರ್ಕ್ ಸಂಪೂರ್ಣವಾಗಿ ಇಲ್ಲದಂತೆಯೇ ಇದೆ. ಇದರಿಂದ ಸಮೀಕ್ಷಾ ಸಿಬ್ಬಂದಿಗೆನೇರವಾಗಿ ಸಮೀಕ್ಷೆ ನಡೆಸುವುದು ಕಷ್ಟಕರವಾಗಿತ್ತು.

ಸಮೀಕ್ಷೆಯನ್ನು ಸುಗಮಗೊಳಿಸಲು, ಕರ‍್ಗಾವ್ ಗ್ರಾಮಕ್ಕೆ ಹತ್ತಿರವಿರುವ ಗೋವಾ ರಾಜ್ಯದ ನೇತ್ರಾವಳಿಯಲ್ಲಿ ಶಿಬಿರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಶಿಬಿರದಲ್ಲಿ ಗ್ರಾಮಸ್ಥರ ವಿವರಗಳನ್ನು ಸಂಗ್ರಹಿಸಿ, ದಾಖಲೆ ಪರಿಶೀಲನೆ ನಡೆಸಿ, ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗುವುದು.

ಮೊನ್ನೆಯಷ್ಟೆ ಕಂದಾಯ ಇಲಾಖೆಯ ಅಧಿಕಾರಿಗಳು ಕಾಡು ದಾರಿಯ ಮೂಲಕ ಗ್ರಾಮ ತಲುಪಿ, ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳಿಗೆ ಅಂಟಿಸಿದ ಯುಎಚ್ ಐಡಿ ಸಂಖ್ಯೆಗಳ ಪರಿಶೀಲನೆ ನಡೆಸಿದರು. ವಿದ್ಯುತ್ ಸಂಪರ್ಕವಿಲ್ಲದ ಮನೆಗಳ ಮಾಹಿತಿಯನ್ನೂ ಸಂಗ್ರಹಿಸಿದರು. ಚಾರ್ಜಿಂಗ್ ಬಲ್ಬ್ ಬೆಳಕಿನಲ್ಲಿ ದಾಖಲೆ ಪರಿಶೀಲನೆ ನಡೆಸಬೇಕಾದ ಪರಿಸ್ಥಿತಿ ಸಿಬ್ಬಂದಿಗೆ ಎದುರಾಯಿತು.

ಗ್ರಾಮದಲ್ಲಿ ಒಟ್ಟೂ 32 ಮನೆಗಳು ಹಾಗೂ 130 ಜನರಿದ್ದು, ಮತದಾರರ ಪಟ್ಟಿಯ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ.

ಕರ‍್ಗಾವ್ ಗ್ರಾಮದಿಂದ ಗೋಟೆಗಾಳಿ ಗ್ರಾಮ ಪಂಚಾಯಿತಿ ಕೇವಲ 16 ಕಿಲೋಮೀಟರ್ ದೂರದಲ್ಲಿದ್ದರೂ, ರಸ್ತೆ ಮಾರ್ಗವಾಗಿ ಹೋಗಲು ಗೋವಾ ರಾಜ್ಯದ ಕಾಣಕೋಣ ಹಾಗೂ ನೇತ್ರಾವಳಿ ಮಾರ್ಗವನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ 70 ಕಿಲೋಮೀಟರ್ ಅಂತರದ ಗ್ರಾಮಕ್ಕೆ ತಲುಪಲು 125 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ.

ಕರ್ನಾಟಕದ ಗಡಿಯ ಈ ಗ್ರಾಮದಲ್ಲಿ ರಸ್ತೆ, ವಿದ್ಯುತ್ ಹಾಗೂ ಮೊಬೈಲ್ ನೆಟ್ವರ್ಕ್ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ನೆರೆಯ ಗೋವಾ ರಾಜ್ಯದಲ್ಲಿ ಸಮೀಕ್ಷಾ ಶಿಬಿರ ನಡೆಸಬೇಕಾದ ಪರಿಸ್ಥಿತಿ ಜಿಲ್ಲಾಡಳಿತಕ್ಕೆ ಎದುರಾಗಿದೆ.

ಇದನ್ನೂ ಓದಿ : ಕುಮಟಾ ಕ್ಷೇತ್ರದಲ್ಲಿ ಮೈತ್ರಿ ಸವತಿ ಮಕ್ಕಳಾದರಾ ಜೆಡಿಎಸ್..? ಬಿಜೆಪಿ ಹೀಗೇಕೆ ಮಾಡಿತು