ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಪಹರೆ ವೇದಿಕೆಯ ಒಳ್ಳೆಯ ಕೆಲಸವನ್ನು ಪ್ರಧಾನಿಗೆ ತಿಳಿಸುವ ಜವಾಬ್ದಾರಿ ನನ್ನದು. ಪ್ರಧಾನಿಯಿಂದ ಖಂಡಿತಾ ಪಹರೆಗೆ ಪತ್ರ ಬರಲಿದೆ ಎಂದು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಕಾರವಾರ ಬಾಡದ ಶಿವಾಜಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ನಡೆದ ಪಹರೆ ವೇದಿಕೆಯ ದಶಮಾನೋತ್ಸವದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಸ್ವಚ್ಚತೆಯ ಬಗ್ಗೆ ಕರೆ ನೀಡಿದ್ದಾರೆ. ಪಹರೆ ವೇದಿಕೆ ಕೂಡ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸ್ವಚ್ಚತೆಯ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಪಹರೆಯು ನಾಡಿನ ಹಲವು ದಿಗ್ಗಜರನ್ನು ಜಿಲ್ಲೆಗೆ ಕರೆತಂದು ಪರಿಚಯಿಸುವ ಕೆಲಸ ಮಾಡಿದೆ. ಸ್ವಚ್ಚತೆಯ ಜೊತೆಗೆ ಜನರ ಮನಸ್ಸನ್ನೂ ಶುದ್ಧಗೊಳಿಸುವ ಕೆಲಸ ಪಹರೆ ಮಾಡಿದಿದೆ. ಎಲ್ಲರನ್ನ ಒಗ್ಗೂಡಿಸುವ ಶಕ್ತಿ ಪಹರೆ ವೇದಿಕೆಗೆ ಇದೆ ಎಂದರು.
“ಸ್ವಚ್ಚತೆಯನ್ನು ಸವಾಲಾಗಿ ಸ್ವೀಕರಿಸಿ. ಪ್ರಧಾನಿ ಮೋದಿಯವರ ಆದರ್ಶವನ್ನು ಪಾಲಿಸಿ ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ನೀಡಿ. ದೃಢಸಂಕಲ್ಪದಿಂದ ಸ್ವಚ್ಛತೆಯನ್ನು ಅಳವಡಿಸಿದರೆ ಮಾತ್ರ ಸಮಾಜ, ದೇಶ ಉತ್ತಮವಾಗಿ ಸಂಘಟಿತವಾಗಬಹುದು” ಎಂದರು.
“ಕಸವನ್ನು ಕುರಿತು ಕೇವಲ ಮಾತಾಡಿದರೆ ಸ್ವಚ್ಛತೆ ಸಾಧಿಸಲಾಗುವುದಿಲ್ಲ. ನೇರವಾಗಿ ಕೆಲಸ ಮಾಡಿದಾಗ ಮಾತ್ರ ಫಲಿತಾಂಶ ಬರುತ್ತದೆ. ಜಗತ್ತಿನಲ್ಲಿ ಪರಿಸರ ಅಸಮತೋಲನದಿಂದ ಸಮಸ್ಯೆಗಳು ಹೆಚ್ಚುತ್ತಿವೆ. ಮುಂದಿನ ಪೀಳಿಗೆ ಹೆಚ್ಚು ಸಮಸ್ಯೆ ಎದುರಿಸಲಿದೆ. ಅದನ್ನು ತಡೆಯಲು ಸ್ವಚ್ಚತೆಯನ್ನು ಆದ್ಯತೆಯಿಂದ ತೆಗೆದುಕೊಳ್ಳಬೇಕು,” ಎಂದರು.ಸಂಸದರು ಪ್ರವಾಸೋದ್ಯಮ ಮತ್ತು ಸ್ವಚ್ಛತೆಯ ಸಂಬಂಧವನ್ನೂ ವಿವರಿಸಿ, “ಸ್ವಚ್ಚತೆ ಇದ್ದಾಗ ಮಾತ್ರ ಪ್ರವಾಸೋದ್ಯಮ ಬೆಳೆಯುತ್ತದೆ. ಪ್ರವಾಸೋದ್ಯಮದ ಪರಿಣಾಮವಾಗಿ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ. ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿಕೊಂಡು ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ,” ಹೇಳಿದರು.
ಸಿರಸಿ ಅರಣ್ಯ ವೃತ್ತದ ಸಿಸಿಎಫ್ ಡಾ. ಹೀರಾಲಾಲ ಮಾತನಾಡಿ, ಕಸವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು. ವಿಶ್ವದಲ್ಲಿ ೧೮ ಬಯೋ ಡೈವರ್ಸಿಟಿ ಹಾಟ್ ಸ್ಪಾಟ್‌ಗಳಿವೆ ಅದರಲ್ಲಿ ನಮ್ಮ ಪಶ್ಚಿಮ ಘಟ್ಟವೂ ಒಂದು. ಅದನ್ನು ಮಾಲಿನ್ಯದಿಂದ ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕಾರವಾರದ ಪರಿಸರವನ್ನು ಕಳೆದ ಹತ್ತು ವರ್ಷಗಳಿಂದ ಸ್ವಚ್ಚಗೊಳಿಸುತ್ತಿರುವ ಪಹರೆ ಸಂಸ್ಥೆಯು ಇನ್ನಷ್ಟು ಸಾಧನೆ ಮಾಡಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಹರೆ ವೇದಿಕೆಯ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಮಾತನಾಡಿ ಪಹರೆ ವೇದಿಕೆಯವರು ಪ್ರತಿವಾರದ ಒಂದು ಗಂಟೆಯ ಸ್ವಚ್ಛತಾ ಸೇವೆ ಎಲ್ಲಡೆಯೂ ಮಾದರಿಯಾಗಬೇಕಿದೆ. ಕಾರವಾರ ನಗರದ ಸ್ವಚ್ಛತೆಯಲ್ಲಿ ಪಹರೆ ವೇದಿಕೆಯ ಕೊಡುಗೆ ಅಪಾರವಾಗಿದೆ ಎಂದರು.
ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯದರ್ಶಿ ಟಿ.ಬಿ ಹರಿಕಾಂತ ನಿರ್ವಹಿಸಿದರು. ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಸಾಮಾಜಿಕ ಅರಣ್ಯ ವಿಭಾಗದ ಮಂಜುನಾಥ ನಾವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಜಾ ಜೋಯಿಸ್ ದೇಶಭಕ್ತಿ ಗೀತೆ ಹಾಡಿದರು. ಸುಜಾತ ತಾಮ್ಸೆ ವಂದಿಸಿದರು. ಕಾರ್ಯಕ್ರಮದ ಯಶಸ್ವಿಗೆ ಪಹರೆಯ ಪೂರ್ತಿ ಬಳಗ ಶ್ರಮಿಸಿತ್ತು.
ಪ್ರಾರಂಭೋತ್ಸವದಲ್ಲಿ ಹತ್ತಾರು ಕಾರ್ಯ
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸ್ವಚ್ಚತೆಯ ಕುರಿತು ಜಾಗೃತಿ ಸ್ಟಿಕರ್ ಬಿಡುಗಡೆ ಮಾಡಲಾಯಿತು. ಅಲ್ಲದೇ ಸಾವಿರ ಗಿಡ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಹನ್ನೊಂದು ಜನರಿಗೆ ವೇದಿಕೆಯಲ್ಲೇ ಹಣ್ಣಿನ ಸಶಿಗಳನ್ನು ನೀಡಲಾಯಿತು. ಅಲ್ಲದೆ ಇದುವರೆಗೂ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೆಡಿಪೆಡ್ನೇಕರ್, ರಮೇಶ ಗುನಗಿ, ಸುರೇಶ ನಾಯ್ಕ, ಸದಾನಂದ ಮಾಂಜ್ರೇಕರ್, ಪ್ರಕಾಶ ಕೌರ್, ಖೈರುನ್ನಿಸಾ ಶೇಖ್, ಜಿಡಿಮನೋಜೆ ಮತ್ತು ಹಾಲಿ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್‌ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಆವರಣದಲ್ಲಿದ್ದ ಶಿವಾಜಿ ಪ್ರತಿಮೆಗೆ ಸಂಸದ ಕಾಗೇರಿ ಮಾಲಾರ್ಪಣೆ ಮಾಡಿ, ಶಿವಾಜಿ ತಾಯಿ ಜೀಜಾಬಾಯಿ ಹೆಸರಲ್ಲಿ ಗಿಡವನ್ನು ನೆಟ್ಟರು. ಬಳಿಕ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರೊಂದಿಗೆ ಬುಟ್ಟಿ ಹಿಡಿದು ಕಾಲೇಜಿನ ಆವರಣವನ್ನು ಸ್ವಚ್ಚಗೊಳಿಸಿದರು.
ಫಲಾಪೇಕ್ಷೆಯಿಲ್ಲದೇ ಪಹರೆ ಸೇವೆ :ನಾಗರಾಜ ನಾಯಕ ಪಹರೆ ವೇದಿಕೆ ಅಧ್ಯಕ್ಷರು
ಅತೀ ಹೆಚ್ಚು ಮಳೆ ಬೀಳುವ ಜಿಲ್ಲೆಯಲ್ಲಿ ಇಂದಿಗೂ ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರಿಗಾಗಿ “ಪಾನಿ ಪಾರ್ಲಿಮೆಂಟ್” ಎಂಬ ಹೊಸ ಯೋಜನೆ ಮಾಡುವ ಕನಸು ಪಹರೆ ವೇದಿಕೆ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಹರೆ ಸ್ವಚ್ಛತಾ ಸಂಘಟನೆಯ ಹತ್ತು ವರ್ಷಗಳ ಮಾನವ ದಿನಗಳನ್ನು ಲೆಕ್ಕ ಹಾಕಿದರೆ ಪಹರೆ ವೇದಿಕೆ ಅಗಾಧ ಪ್ರಮಾಣದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಚತೆಗೆ ತನ್ನದೇ ಕೊಡುಗೆ ನೀಡಿದೆ. ಆದರೆ ಇದಲ್ಲೆವೂ ಸ್ವಚ್ಛ ಸಮಾಜದ ಬಗ್ಗೆ ಇರುವ ತುಡಿತದಿಂದ ಪಹರೆಯ ಸ್ವಯಂ ಸೇವಕರು ಮಾಡಿರುವ ಕೆಲಸ. ಇಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದ ಸೇವೆಯನ್ನು ಕಾಣುವಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ