ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಮಹಾನ್ ಲೇಖಕ ಹಾಗೂ ಹಿರಿಯ ಕಾದಂಬರಿಗಾರರಾದ ಎಸ್.ಎಲ್. ಭೈರಪ್ಪ (SL Bhyrappa) (94) ಇಹಲೋಕ ತ್ಯಜಿಸಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದ ಭೈರಪ್ಪ ಅವರು, ಬಾಲ್ಯದಲ್ಲೇ ತಾಯಿಯನ್ನು ಪ್ಲೇಗ್ ರೋಗದಿಂದ ಕಳೆದುಕೊಂಡು ಸಂಕಷ್ಟದ ಜೀವನ ನಡೆಸಿದರು. ವಿದ್ಯಾಭ್ಯಾಸ ಮುಂದುವರಿಸಲು ಹಲವಾರು ರೀತಿಯ ಕೆಲಸಗಳಲ್ಲಿ ತೊಡಗಿದ ಅವರು, ಬಾಲ್ಯದಲ್ಲೇ ಸಾಹಿತ್ಯದತ್ತ ಆಕರ್ಷಿತರಾದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬರಹಗಳು ಭೈರಪ್ಪರ ಸಾಹಿತ್ಯ ಬದುಕಿಗೆ ಪ್ರೇರಣೆಯಾದವು.

ಭೈರಪ್ಪರ ಪ್ರಸಿದ್ಧ ಕೃತಿಗಳಲ್ಲಿ ಪರ್ವ, ಆವರಣ, ಗೃಹಭಂಗ, ವಂಶವೃಕ್ಷ, ಅನ್ವೇಷಣೆ, ಯಾನ, ಉತ್ತರಕಾಂಡ, ಮಂದ್ರ, ಸಾರಥಾ ಪ್ರಮುಖ. ಅವರ ಕಾದಂಬರಿಗಳಲ್ಲಿನ ಹಲವಾರು ಕಥೆಗಳು ಚಿತ್ರರಂಗಕ್ಕೂ ಪ್ರವೇಶಿಸಿವೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿ ನೆರಳು ಚಿತ್ರ ರೂಪ ಪಡೆದವು. ಗೃಹಭಂಗ ಧಾರಾವಾಹಿಯಾಗಿ ದೂರದರ್ಶನದಲ್ಲಿ ಪ್ರಸಾರವಾಗಿದ್ದು, ದಾಟು ಹಿಂದಿ ಧಾರಾವಾಹಿಯಾಗಿ ತೆರೆ ಕಂಡಿತ್ತು.

ಭೈರಪ್ಪ ಅವರು ತಮ್ಮ ಜೀವನ ಅನುಭವಗಳನ್ನು ಒಳಗೊಂಡ ಭಿಟ್ಟಿ ಎಂಬ ಆತ್ಮಕಥನವನ್ನು 1996ರಲ್ಲಿ ಪ್ರಕಟಿಸಿದ್ದರು. ಅವರು ತಮ್ಮ ದೀರ್ಘ ಸಾಹಿತ್ಯಿಕ ಬದುಕಿನಲ್ಲಿ ಅನೇಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದರು.

ಸಾಹಿತ್ಯ ಸೇವೆಗೆ ಭೈರಪ್ಪರಿಗೆ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. 1966ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2016ರಲ್ಲಿ ಪದ್ಮಶ್ರೀ, 2023ರಲ್ಲಿ ಪದ್ಮಭೂಷಣ ಸೇರಿದಂತೆ ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದು ಗೌರವಿಸಲ್ಪಟ್ಟಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗಳನ್ನು ಪಡೆದಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಭೈರಪ್ಪ ಅವರ ಅಗಲಿಕೆಯಿಂದ ಸಾಹಿತ್ಯ ಪ್ರಪಂಚ ಶೋಕಸಾಗರದಲ್ಲಿ ಮುಳುಗಿದೆ.

ಇದನ್ನೂ ಓದಿ: ಗೌಡಳ್ಳಿಯಲ್ಲಿ ಬಸ್-ಸ್ಕೂಟಿ ಡಿಕ್ಕಿ, ಸ್ಕೂಟಿ ಸವಾರ ಆಸ್ಪತ್ರೆಗೆ ದಾಖಲು