ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ತಾಲೂಕಿನ ಹಳಗಾ ಗ್ರಾಮದ ಶಾಂತವಾದ ಪರಿಸರದಲ್ಲಿ ನಡೆದ ಈ ಘಟನೆ, ಗ್ರಾಮಸ್ಥರನ್ನ ಬೆಚ್ಚಿಬೀಳುವಂತೆ ಮಾಡಿದೆ. ಇಸ್ಮಾಯಿಲ್ ದಫೇದಾರ್ ಎಂಬ ಬೀದರ್ ಮೂಲದ ವ್ಯಕ್ತಿ, ತನ್ನ ಪತ್ನಿ ಪರ್ವೀನ್ ಬೇಗಂ ಅವರನ್ನು ಚಿಕಿತ್ಸೆ ಕೊಡಿಸುವ ನೆಪದಲ್ಲಿ ಹಳಗಾಕ್ಕೆ ಕರೆದುಕೊಂಡು ಬಂದಾಗ,ಯಾರೂ ಊಹಿಸದಂತಹ ರೀತಿಯಲ್ಲಿ ಕೊಲೆ ಮಾಡಿ ಎಸೆದು ಹೋಗಿದ್ದಾನೆ.
ಪರ್ವೀನ್ ಬೇಗಂ (45) ಮತ್ತು ಇಸ್ಮಾಯಿಲ್ ದಂಪತಿಗೆ ಆರು ಮಂದಿ ಮಕ್ಕಳು. ಎಲ್ಲಾ ಮಕ್ಕಳ ವಿವಾಹವಾಗಿದ್ದು ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ನೆಲೆಸಿದ್ದಾರೆ. ಹೊರ ಪ್ರಪಂಚಕ್ಕೆ ಎಲ್ಲವೂ ಚೆನ್ನಾಗಿರುವಂತೆ ಕಾಣುತ್ತಿತ್ತು. ಆದರೆ ಒಳಗೆ, ಇಸ್ಮಾಯಿಲ್ ಮನಸ್ಸಿನಲ್ಲಿ ಪತ್ನಿಯ ಶೀಲದ ಬಗ್ಗಯೇ ಶಂಕೆ ಇತ್ತು. ಆ ಶಂಕೆಯೇ ಆತನ ಕಣ್ಣಿಗೆ ಕೆಂಪು ರಕ್ತದಂತೆ ತೋರಿ, ಪರ್ವೀನ್ ಅವರ ಜೀವನದ ಮೇಲೆ ಕತ್ತಲೆ ಬೀರುವಂತೆ ಮಾಡಿದೆ..
ಹಳಗಾದಲ್ಲಿ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಪರ್ವೀನ್ ಅವರನ್ನು ಕರೆದುಕೊಂಡು ಬಂದ ಇಸ್ಮಾಯಿಲ್, ತನ್ನ ಸ್ನೇಹಿತ ಅಜಮುದ್ದೀನ್ ಮೊಹಮ್ಮದ್ ಹಾಗೂ ಇನ್ನಿಬ್ಬರ ಸಹಕಾರದಿಂದ, ಒಂದು ರಹಸ್ಯ ಸಂಚು ರೂಪಿಸಿದ. ದಾರಿಯಲ್ಲಿ ಪರ್ವೀನ್‌ಗೆ ಊಟ ನೀಡುವಾಗ ಅದರಲ್ಲಿ ವಿಷ ಬೆರೆಸಲಾಯಿತು. ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಪರ್ವೀನ್ ಅವರಿಗೆ ತಲೆ ಸುತ್ತಿ ಬಿಳುವಂತಾಗಿತ್ತು. ತಕ್ಷಣ ಆಕೆಯ ಶವವನ್ನು, ಕಾಡಿನ ದಟ್ಟ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದು ಹೋಗಿದ್ದಾನೆ. ಪತ್ನಿಯ ಶವವನ್ನ ಕಾಡಿನಲ್ಲಿ ಎಸೆದುಹೋದ ಇಸ್ಮಾಯಿಲ್, ಮನೆಗೆ ವಾಪಸ್ಸಾಗಿ, ಬಳಿಕ ಪತ್ನಿ ಕಾಣೆಯಾಗಿರುವಂತೆ ನಟಿಸಿ, ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಆದರೆ, ಚಿತ್ತಾಕುಲ ಪೊಲೀಸರಿಗೆ, ಇಸ್ಮಾಯಿಲ್‌ನ ನಟನೆಗೆ ನಂಬಿಕೆ ಇಡಲಿಲ್ಲ. ತನಿಖೆಯನ್ನ ಮುಂದುವರೆಸಿದ ಪೊಲೀಸರು, ಪರ್ವೀನ್ ಅವರ ಶವ ಪತ್ತೆ ಹಚ್ಚಿ, ಅದು ಸಹಜ ಸಾವು ಅಲ್ಲ ಎಂಬುದನ್ನು ದೃಢಪಡಿಸಿದರು.ಶವದ ಸ್ಥಿತಿ ಕಂಡು ಇದು ಕೊಲೆ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದರು..
ಪೊಲೀಸರ ತನಿಖೆ ವೇಳೆ ಇಸ್ಮಾಯಿಲ್ ಕೊನೆಗೆ ಸತ್ಯ ಒಪ್ಪಿಕೊಂಡಿದ್ದಹ. ತನ್ನ ಪತ್ನಿಯ ಶೀಲದ ಬಗ್ಗೆ ಶಂಕೆಯಿಂದ ಈ ಕ್ರೂರ ಕೃತ್ಯ ಎಸಗಿದ್ದೇನೆ ಎಂದು ಪೊಲೀಸರ ಎದುರು ಸತ್ಯ ಬಿಚ್ಚಿಟ್ಟಿದ್ದಾನೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಸ್ಮಾಯಿಲ್ ದಫೇದಾರ್ ಎಂಬಾತನನ್ನ ಈಗ ಪೊಲೀಸರು ಬಂಧಿಸಿದ್ದಾರೆ.