ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಯಲ್ಲಾಪುರ- ಬಾಳೆಗುಳಿ ಕ್ರಾಸ್ ರಸ್ತೆಯ ಕಳಪೆ ಕಾಮಗಾರಿ ವಿರುದ್ಧ ಹಾಗೂ ರಸ್ತೆ ದುರಸ್ತಿ ಆಗ್ರಹಿಸಿ ಸೆ.26ರಂದು ಅಂಕೋಲಾದ ಹೊನ್ನಳ್ಳಿ ಬಳಿ ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಹೆದ್ದಾರಿ ತಡೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷರಾದ ಮಾಧವ ನಾಯಕ, ಏಪ್ರಿಲ್- ಮೇ ತಿಂಗಳಿನಲ್ಲಿ ನಡೆದ ಮಾಸ್ತಿಕಟ್ಟಾದಿಂದ ಯಲ್ಲಾಪುರ ಮಾಗೋಡ ಕ್ರಾಸ್‌ವರೆಗಿನ ರಸ್ತೆ ಮರುಡಾಂಬರೀಕರಣ ಕಳಪೆಯಾಗಿದ್ದು, ಇದರಿಂದಾಗಿ ರಸ್ತೆಗಳು ಹದಗೆಟ್ಟು ವಾಹನಗಳು ಸಂಚರಿಸಲು ಅಸಾಧ್ಯವೆಂಬ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದ್ದಾರೆ.
ಡಾಂಬರು ಕಿತ್ತು, ಮಳೆ ಬಂದರೆ ವಾಹನ ಓಡಾಡಲಾಗದಂಥ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಅಗಸೂರು ಬಳಿ ಬಸ್ ಒಂದು ತಡೆಗೋಡೆಗೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದಿತ್ತು. ಗುರುವಾರ ಅಡ್ಲೂರಿನಲ್ಲಿ ಬಸ್ ಹಾಗೂ ಟ್ಯಾಂಕರ್ ಅಪಘಾತದಿಂದ ಇಬ್ಬರು ಸಾವನ್ನಪ್ಪಿದ್ದು, ಇದಕ್ಕೆ ಕಾರಣ ಕೂಡ ಇದೇ ಕಳಪೆ ಕಾಮಗಾರಿ ಎಂದು ಅವರು ದೂರಿದ್ದಾರೆ.
ಈ ರೀತಿಯ ಅಪಘಾತದ ಘಟನೆಗಳು ಆಗಾಗ್ಗೆ ಮರುಕಳಿಸುತ್ತಿದ್ದು, ರಸ್ತೆಯ ಪ್ರತಿಯೊಂದು ತಿರುವು ಅಪಾಯವನ್ನು ಆಹ್ವಾನಿಸುವಂತಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ರಸ್ತೆ ಸರಿಪಡಿಸಲು ಆಗ್ರಹಿಸಿ ಈ ಹೆದ್ದಾರಿ ತಡೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುವಂತೆ ಅವರು ಕೋರಿದ್ದಾರೆ.
ಇದನ್ನೂ ಓದಿ : ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಹಿನ್ನಲೆ: ಹೊನ್ನಾವರದ ಗೇರುಸೊಪ್ಪದಲ್ಲಿ ಸಾರ್ವಜನಿಕ ಅಹವಾಲು ಸಭೆ