ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ೧೦೦೮ ಮಹಾಮಂಡಲೇಶ್ವರ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಚಾತುರ್ಮಾಸ್ಯ ವ್ರತಾಚರಣೆ ಎಲ್ಲರ ಸಹಕಾರದೊಂದಿಗೆ ಕಳೆದ ತಿಂಗಳು ಅದ್ಧೂರಿಯಾಗಿ ನಡೆದಿದ್ದು, ಇದೀಗ ನಾಮಧಾರಿ ಸಮಾಜದ ಸರ್ವತೋಮುಖ ಏಳ್ಗೆಗಾಗಿ ಸಮಾಜದ ಹಿತಚಿಂತಕರಿಂದ ಚಿಂತನ-ಮಂಥನ ಸಭೆ ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದಲ್ಲಿ (ಭಾನುವಾರ) ಸೆ.14ರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.
ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷರಾದ ಎಚ್. ಆರ್. ನಾಯ್ಕ ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದು, ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕೆಂದರೆ ಸಮಾಜದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಬೇಕು. ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲೀಕರಣ, ಉದ್ಯೋಗ, ಧಾರ್ಮಿಕ, ಸಾಂಸ್ಕೃತಿಕ, ಕೃಷಿ, ಕ್ರೀಡೆ, ಸಾಮಾಜಿಕ ಸಂಸ್ಕಾರ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಮುನ್ನಡೆಯಲು ತಜ್ಞರ ಮತ್ತು ಅನುಭವಿಗಳ ಮಾರ್ಗದರ್ಶನ ಮತ್ತು ಸಲಹೆ, ಸೂಚನೆ ಅತ್ಯಗತ್ಯ.
ಸಮಾಜದ ಮಕ್ಕಳು ಔದ್ಯೋಗಿಕ ಮತ್ತು ಆರ್ಥಿಕವಾಗಿ ಸಬಲೀಕರಣ ಸಾಧಿಸಲು ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಸೆ. 14 ರ ಬೆಳಗ್ಗೆ 10ಗಂಟೆಗೆ ಚಿಂತನ-ಮಂಥನ ಸಭೆಯನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ತಜ್ಞರು ಮತ್ತು ಚಿಂತಕರಿಂದ ವಿಶೇಷ ಉಪನ್ಯಾಸದ ಜೊತೆಗೆ ಸಮಾಜದ ಏಳ್ಗೆ ಮತ್ತು ಹಿತಕ್ಕಾಗಿ ಕೆಲ ಸಲಹೆ, ಸೂಚನೆ ನೀಡಲಾಗುವುದು. ನಾಮಧಾರಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಸಮಾಜದ ಏಳ್ಗೆಗಾಗಿ ಸಹಕಾರ ನೀಡುವಂತೆ ಎಚ್. ಆರ್. ನಾಯ್ಕ ಕೋನಳ್ಳಿಯವರು ವಿನಂತಿಸಿದ್ದಾರೆ.
ಇದನ್ನೂ ಓದಿ : ಸಿದ್ದಾಪುರ-ಬನವಾಸಿ, ಸಾಗರಕ್ಕೆ ಸೇರಿಸಲು ಬಿಡುವುದಿಲ್ಲ : ಅನಂತಮೂರ್ತಿ ಹೆಗಡೆ