ಶಿರಸಿ: ಸಿದ್ದಾಪುರ ತಾಲೂಕು ಹಾಗೂ ಬನವಾಸಿಯನ್ನು ಸೇರ್ಪಡಿಸಿ ಸಾಗರ ಜಿಲ್ಲೆ ರಚನೆಗೆ ನಮ್ಮ ವಿರೋಧವಿದ್ದು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಇದೆ. ಆದರೂ ಪ್ರಯತ್ನ ಮುಂದುವರೆದರೆ ಪಕ್ಷಾತೀತ ಹೋರಾಟ ನಡೆಸುತ್ತೇವೆ ಎಂದು ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 3೦ ವರ್ಷಗಳಿಂದ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಒಳಗೊಂಡು ಶಿರಸಿ ಜಿಲ್ಲೆಯಾಗಬೇಕೆಂಬ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರವು ಡಿ.31 ರ ಒಳಗಡೆ ತಾಲೂಕು ರಚನೆ ಹಾಗೂ ಜಿಲ್ಲೆ ರಚನೆ ಪಟ್ಟಿ ನೀಡಿ ಎಂದು ಕೇಳಿರುವುದನ್ನು ನಾವು ಕೇಳಿ ಸಂತೋಷಗೊಂಡಿದ್ದೆವು. ಶಿರಸಿ ಜಿಲ್ಲೆಯಾಗುತ್ತದೆ ಎಂಬ ವಿಶ್ವಾವಿತ್ತು. ಈ ಹೋರಾಟ ಕೆಡಿಸಬೇಕೆಂದು ಕೆಲವರು ಸಿದ್ದಾಪುರ ಹಾಗೂ ಬನವಾಸಿ ಸೇರಿಸಿಕೊಂಡು ಸಾಗರ ಜಿಲ್ಲೆಯನ್ನಾಗಿ ಮಾಡಲು ಹೊರಟಿದ್ದಾರೆ. ಸಾಗರ ಶಾಸಕ ಗೋಪಾಲಕೃಷ್ಣ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ಸಭೆಯೂ ನಡೆಯುತ್ತಿದೆ. ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂಬ ಕೂಗು ತೀವ್ರವಾಗಿ, ಪಕ್ಷಾತೀಯ ಹೋರಾಟ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತವಾಗಬೇಕು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿಯಾಗಿ ಶಿರಸಿ ಪ್ರತ್ಯೇಕ ಜಿಲ್ಲೆಯಾಗಲು ನಮ್ಮ ಜತೆ ಕೈಜೋಡಿಸಬೇಕು ಎಂದು ವಿನಂತಿಸಿದಾಗ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ಸಂಸದ ವಿಶ್ವೇಶ್ವರ ಹೆಗಡ ಕಾಗೇರಿ ಅವನ್ನ ವಿನಂತಿಸಿದಾಗ ಅವರೂ ಹೋರಾಟಕ್ಕೆ ಬೆಂಬಲ ನೀಡಿದ್ದರು. ಕೆಲ ದಿನಗಳಿಂದ ಸಿದ್ದಾಪುರ ಹಾಗೂ ಬನವಾಸಿ ಭಾಗವನ್ನು ಸಾಗರಕ್ಕೆ ಸೇರ್ಪಡಿಸಿ, ಜಿಲ್ಲೆ ಮಾಡಲು ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯದರ್ಶಿ ಎಂ.ಎಂ.ಭಟ್ಟ ಕಾರೇಕೊಪ್ಪ ಮಾತನಾಡಿ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರ ಜಿಲ್ಲೆ ಮಾಡಲು ಹೊರಟಿದ್ದಾರೆ. 7 ತಾಲೂಕು ಶಿವಮೊಗ್ಗ ಹತ್ತಿರವಾಗಿದ್ದು, ಉತ್ತರಕನ್ನಡದ ಭೌಗೋಳಿಕ ಪರಿಸ್ಥಿತಿ, ಇಲ್ಲಿಯ ಹೋರಾಟವನ್ನು ಗಮನಿಸಬೇಕು. ಘಟ್ಟದ ಮೇಲಿನ ತಾಲೂಕಿನ ನಾವೆಲ್ಲರೂ ಒಂದು ಕುಟುಂಬದ ರೀತಿಯಲ್ಲಿ ಇದ್ದೇವೆ. ಗೋಪಾಲಕೃಷ್ಣ ಅವರ ಬಳಿಯೂ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದ್ದಾರೆ. ಯಾವ ಕಾರಣಕ್ಕೂ ಸಿದ್ದಾಪುರವನ್ನು ನಮ್ಮ ಜಿಲ್ಲೆಯಿಂದ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬುದಾಗಿ ನಮ್ಮ ಶಾಸಕರು ತಿಳಿಸಿದ್ದಾರೆ. ಸಿದ್ದಾಪುರ ತ್ಯಾಗ ಮಾಡಿದ ತಾಲೂಕಾಗಿದೆ. ಶಿರಸಿ ಪ್ರತ್ಯೇಕ ಜಿಲ್ಲೆಗೆ ಸಾಗರದವರು ಸಹಕಾರ ನೀಡಬೇಕು ಎಂದರು.
ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಶಿವಮೊಗ್ಗ, ಸಾಗರ ಪ್ರದೇಶದವರು ಇದ್ದ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ. ಬದಲಾಗಿ ಉತ್ತರಕನ್ನಡ ಜಿಲ್ಲೆಯ ತಾಲೂಕನ್ನು ಸೇರ್ಪಡೆಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಅದು ಸಾಧ್ಯವೂ ಇಲ್ಲ. ಸಿದ್ದಾಪುರ ಹಾಗೂ ಬನವಾಸಿ ಉತ್ತರಕನ್ನಡ ಜಿಲ್ಲೆಯ ಜತೆ ನಂಟು ಹೊಂದಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದವರು ಅಣ್ಣ-ತಮ್ಮನ ರೀತಿ ಇದ್ದೇವೆ. ನಮ್ಮಿಂದ ಸಿದ್ದಾಪುರ ಹಾಗೂ ಬನವಾಸಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಹಿರಿಯ ಧುರೀಣ ರಮೇಶ ದುಭಾಶಿ ಮಾತನಾಡಿ, ಸಿದ್ದಾಪುರ ಹಾಗೂ ಬನವಾಸಿ ಸೇರಿಸಿ ಸಾಗರ ಜಿಲ್ಲೆಯನ್ನಾಗಿ ಮಾಡುವುದನ್ನು ಶಿರಸಿ ಜನತೆ ಖಂಡಿಸುತ್ತೇವೆ. ಇದು ಅವೈಜ್ಞಾನಿಕವಾಗಿದೆ. ಒಂದೇ ಮನೆತನದ ರೀತಿಯಲ್ಲಿ ನಾವು ಇದ್ದೇವೆ. ಭೌಗೋಳಿಕ, ಆರ್ಥಿಕ, ಸಾಮಾಜಿಕವಾಗಿ ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಅದನ್ನು ಬೇರ್ಪಡಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಅವರು ಗಮನಿಸಬೇಕು. ಅವೈಜ್ಞಾನ ಪರಿಸ್ಥಿತಿಯಿಂದ ಖಂಡಿತ ಸೋಲು ಆಗುತ್ತದೆ. ಶಿರಸಿ ಜಿಲ್ಲೆ ಹೋರಾಟ ಒಂದು ಹಂತಕ್ಕೆ ಹೋಗಿದೆ. ಅದಕ್ಕೆ ಕಲ್ಲು ಹಾಕುವುದು ಒಳ್ಳೆಯದಲ್ಲ ಎಂದು ಹೇಳಿದರು.