- ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ದೋಣಿ ಮುಳುಗಡೆಯಾಗಿ ಆರು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಕಾರವಾರ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಆರು ಮಂದಿ ಮೀನುಗಾರರು ಸೇರಿ ನಾಡದೋಣಿಯ ಮೂಲಕ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ಭಾರೀ ಅಲೆ ದೋಣಿಗೆ ಅಪ್ಪಳಿಸಿದ ಪರಿಣಾಮ, ಮೀನುಗಾರರಿದ್ದ ದೋಣಿ ಸಮುದ್ರದಲ್ಲಿ ಪಲ್ಟಿಯಾಯಿತು. ಸ್ವಲ್ಪ ದೂರದಲ್ಲೇ ಇದ್ದ ಮತ್ತೊಂದು ದೋಣಿಯ ಮೀನುಗಾರರು ಧಾವಿಸಿ, ಸಮುದ್ರದಲ್ಲಿ ಮುಳುಗಡೆಯಾಗಿ ಅಪಾಯಕ್ಕೆ ಸಿಲುಕಿದ್ದ ಆರು ಮಂದಿಯನ್ನು ರಕ್ಷಣೆ ಮಾಡಿದ್ದಾರೆ.
ಭಾರೀ ಮಳೆಯ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಮೀನುಗಾರಿಕೆಗೆ ನಿಷೇಧ ಘೋಷಿಸಿದೆ. ಆದರೂ ಸರ್ಕಾರದ ಆದೇಶವನ್ನು ಲೆಕ್ಕಿಸದೆ ಸಮುದ್ರಕ್ಕೆ ತೆರಳಿದ ಕಾರಣ, ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.