ಸುದ್ದಿಬಿಂದು ಬ್ಯೂರೋ ವರದಿ
Karwar/ ಕಾರವಾರ: ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿ ಚಂಡಮಾರುತ (Cyclone) ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಅಸ್ಥಿರ ಹವಾಮಾನ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಯಲ್ಲಿ 40 ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಸಾರ್ವಜನಿಕರು ಹಾಗೂ ಮೀನುಗಾರರು ಸೂಚನೆಗಳನ್ನು ಪಾಲಿಸುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ. ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದ್ದು ಮುಂದಿನ ಹವಾಮಾನ ಮುನ್ಸೂಚನೆಯನ್ವಯ ಮೀನುಗಾರಿಕೆಯನ್ನು ನಡೆಸಲು ತಿಳಿಸಿದೆ. ಸದರಿ ದಿನಗಳಲ್ಲಿ ಸಾರ್ವಜನಿಕರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಪ್ರವಾಸಿಗರು, ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.
ನದಿ ತೀರದಲ್ಲಿ ವಾಸಿಸುವವರು ಹಠಾತ್ ಪ್ರವಾಹ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವುದು. ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯ ದಡದಲ್ಲಿ ಯಾವುದೇ ಸಮಯದಲ್ಲಿ ಪ್ರವಾಹ ಉಂಟಾಗಬಹುದಾದ ಸಾಧ್ಯತೆ ಇರುವುದರಿಂದ ಅಂತಹ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು.
ಮಳೆಯ ಜೊತೆಗೆ 40-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಅಪಾಯಕಾರಿ ಮರಗಳಿರುವ ಮನೆಗಳಲ್ಲಿ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಮತ್ತು ಮರಗಳ ಕೆಳಗೆ ಅಶ್ರಯ ಪಡೆಯದಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹಾಗೂ ಮೀನುಗಾರರು ಈ ಕೆಳಗಿನ ಸೂಚನೆಗಳನ್ನು ಪಾಲಿಸುವುದು. ಗುಡ್ಡದ ಇಳಿಜಾರಿನ ಪ್ರದೇಶದಲ್ಲಿ ವಾಸಿಸುವರು ಕೂಡಾ ಮಳೆಯ ತೀವ್ರತೆಯನುಸಾರ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು. ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸುವುದು. ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಾರದು ಎಂದು ತಿಳಿಸಲಾಗಿದೆ.
ತುರ್ತು ಸೇವೆಗೆ 24*7 ಕಂಟ್ರೋಲ್ ರೂಮ್ ಟೋಲ್ ಫ್ರೀ ಸಂಖ್ಯೆ 08382-229857 ಮತ್ತು ವಾಟ್ಸಪ್ ಸಂಖ್ಯೆ 9483511015 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮನೆ ಕಳೆದುಕೊಂಡ ರಾಘವೇಂದ್ರ ನಾಯ್ಕರಿಗೆ ಅನಂತಮೂರ್ತಿ ಹೆಗಡೆ ಧನ ಸಹಾಯ