ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕ್ಷೇತ್ರದ ರಸ್ತೆಗಳ ಬಹುತೇಕ ಭಾಗಗಳು ಹೊಂಡಗಳಿಂದ ತುಂಬಿಕೊಂಡಿದ್ದು, ಇಲಾಖೆಗಳು ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದು, ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೊತೆಗೂಡಿ ಅಗಸ್ಟ್‌ 7ರಂದು ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಸಹಾಯಕ ಆಯುಕ್ತರ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರರು, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.

ಅವರು ಶಿರಸಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಸ್ತೆ ಹಾಳಾಗಿರುವುದರಿಂದ‌ ಬಸ್ ಸೇರಿದಂತೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ರೈತ ಸಂಘಟನೆಗಳು, ಸ್ಥಳೀಯ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಬಳಿಕ ಸಹಾಯಕ ಆಯುಕ್ತರು ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಪ್ರಮುಖ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗುವುದು ಎಂದಿದ್ದಾರೆ.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ, “ಗ್ರಾಮ ಪಂಚಾಯತ್ ಗಳಿಗೆ ಅನುದಾನ ಬಂದಿಲ್ಲದ ಕಾರಣ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ ದಿನದಿಂದ ದಿನಕೆ ಹದಗೆಡುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ,” ಎಂದು ತಿಳಿಸಿದರು.

ಹುತಗಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ನಾಯ್ಕ್,.ಜಯಶೀಲ ಗೌಡರ್ ಬಾಶಿ, ಅನಿಲ್ ಕರಿ, ಹಾಲಪ್ಪ ಜಕ್ಕಣ್ಣನವರ್ ಸೇರಿದಂತೆ ಹಲವು ಪ್ರಮುಖರು ಈ ವೇಳೆ ಮಾತನಾಡಿ, “ರಸ್ತೆ ಸಮಸ್ಯೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ:ಬಂಗ್ಲಗುಡ್ಡೆಯ ಭೂಗರ್ಭದಿಂದ ಮತ್ತೆ ಬಹಿರಂಗವಾದ ರಹಸ್ಯ : ಶವದ ಮೂಳೆಗಳು ಪತ್ತೆ!