ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಆ ಸಮಯದಲ್ಲಿ ಆ ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಪಕ್ಷದಲ್ಲಿ ಗುರಿತಿಸಿಕೊಂಡ ಮುಖಂಡರೆಲ್ಲಾ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ತಾಲೂಕಾ ಕಾಂಗ್ರೆಸ್ ಘಟಕ ಮಕಾಡೆ ಮಲಗಿದೆ ಎಂದು ಅವರದೇ ಪಕ್ಷದ ಕಾರ್ಯಕರ್ತರು ಆರೋಪಿಸುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ “ಕೈ” ಪಕ್ಷದಲ್ಲಿ ಇರಬೇಕೋ ಬೇಡವೋ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈ ಹಿಂದೆಲ್ಲಾ ವಿರೋಧ ಪಕ್ಷದವರು ತಮ್ಮ ನಾಯಕರ ವಿರುದ್ಧ ಯಾವುದೇ ಹೇಳಿಕೆ ನೀಡಿದಾಗಾಗಲಿ ಅಥವಾ ಬೆಲೆಯೇರಿಕೆ ವಿಚಾರ ಸೇರಿದಂತೆ ಪಕ್ಷದ ವಿರುದ್ಧದ ವಿಚಾರಗಳು ಬಂದಾಗಲ್ಲೆಲ್ಲಾ ತಾಲೂಕಾ ಘಟಕದಿಂದ ಹಿಡಿದು ಗ್ರಾಮೀಣ ಭಾಗದಲ್ಲಿಯೂ ಸಹ ಪ್ರತಿಭಟನೆಯ ಸದ್ದು ಕೇಳಿ ಬರುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಅವೆಲ್ಲಾ ಬದಲಾಗಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್'' ಹೊಂದಾಣಿಕೆ ಮಾಡಿಕೊಂಡಿದ್ದರೆ ಸದ್ಯ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ
ಕಾಂಗ್ರೆಸ್-ಬಿಜೆಪಿ” ಜೊತೆ ಗುಪ್ತ ಹೊಂದಾಣಿಕೆ ಮಾಡಿಕೊಂಡಂತೆ ಕಂಡು ಬರುತ್ತಿದೆ.
ಪಕ್ಷದ ಜವಾಬ್ದಾರಿ ಹುದ್ದೆಯಲ್ಲಿರುವವರು ತಮ್ಮ ಕ್ಷೇತ್ರಕ್ಕೆ ಒಳಪಡುವ ಗ್ರಾಮೀಣ ಘಟಕಕ್ಕೆ ಆಗಾಗ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವುದು ಸರ್ವೆ ಸಾಮಾನ್ಯವಾಗಿತ್ತು. ಇದರಿಂದಾಗಿ ಸಾಮಾನ್ಯ ಕಾರ್ಯಕರ್ತರು ಹಾಗೂ ತಾಲೂಕಾ ಮುಖಂಡರ ನಡುವೆ ಸಂಬಂಧಗಳು ಗಟ್ಟಿಯಾಗಿರುತ್ತಿತ್ತು. ಆದರೆ ಈಗ ತಾಲೂಕಾ ಮಟ್ಟದಲ್ಲಿರುವ ಮುಖಂಡರಿಗೆ ಗ್ರಾಮೀಣ ಭಾಗದಲ್ಲಿ ತಮ್ಮ ಕಾರ್ಯರ್ತರು ಯಾರು ಎನ್ನುವ ಮುಖ ಪರಿಚಯವೇ ಇಲ್ಲದಂತಾಗಿದೆ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ? ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನೆ ಮಾಡುತ್ತಿದ್ದಾರೆ. ಕಾರ್ಯಕರ್ತರು ಹೀಗೆ ಪ್ರಶ್ನೆ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಕೆಲ “ಕೈ” ಮುಖಂಡರೇ ಹೇಳುತ್ತಿದ್ದಾರೆ.
ರಾಜ್ಯಮಟ್ಟದ ನಾಯಕರು ಹಾಗೂ ರಾಜ್ಯದ ಮಂತ್ರಿ ಮಹೋದಯರು ಬಂದಾಗ ಮಾತ್ರ ಇಲ್ಲಿನ ಮುಖಂಡರು ಅವರ ಹಿಂದೆ ಹೋಗಬಹುದೇ ವಿನಃ ಇದುವರಗೆ ಪಕ್ಷ ಸಂಘಟನೆಗಾಗಿ ಸ್ಥಳೀಯ ಮುಖಂಡರು ಕಾಲು ಹೊರಗಿಟ್ಟ ಉದಾಹರಣೆ ಇಲ್ಲವಂತೆ! ಇನ್ನು ಕೆಲ ಕಾರ್ಯಕರ್ತರಿಗೆ ತಾಲೂಕಿನಲ್ಲಿರುವ ನಾಯಕರು ಯಾರು ಎನ್ನುವ ಮಾಹಿತಿಯೇ ಸರಿಯಾಗಿ ಗೊತ್ತಿಲ್ಲವಂತೆ! ಈ ವಿಚಾರವಾಗಿ ಕಾರ್ಯಕರ್ತರನ್ನು ಕೇಳಿದರೆ, ಈ ಹಿಂದಿನ ನಾಯಕರ ಹೆಸರನ್ನೇ ಜಪಿಸುತ್ತಾರಂತೆ!
ಇತ್ತೀಚೆಗೆ ಕುಮಟಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಕ್ಷದ ಅನೇಕ ಹಿರಿಯರು “ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ ಕುಮಟಾದಲ್ಲಿ ಮಾತ್ರ ಪಕ್ಷ ಮಕಾಡೆ ಮಲಗಿದೆ” ಎಂದು ನೇರವಾಗಿಯೇ ಸಭೆಯಲ್ಲಿ ಕೂಗಾಡಿದ್ದರು.
ಇನ್ನಾದರು ಮಕಾಡೆ ಮಲಗಿರುವ ನಾಯಕರು ನಿದ್ದೆಯಿಂದ ಎದ್ದು ಬಂದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಇಲ್ಲದೆ ಹೋದರೆ ಚುನಾವಣೆ ಹೊತ್ತಲ್ಲಿ ಪಕ್ಷದ ಪರ ಜಯಘೋಷ ಹಾಕುವುದಕ್ಕೂ ಕಾರ್ಯಕರ್ತರು ಸಿಗದಂತಹ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ಇದನ್ನೂ ಓದಿ