ಸುದ್ದಿಬಿಂದು ಬ್ಯೂರೊ ವರದಿ
ಕಾರವಾರ:- ಬಿಜೆಪಿಯಲ್ಲಿ ಪಕ್ಷದ ಕೆಲಸ ನಿರಂತರ ಪ್ರಕ್ರಿಯೆಯಾಗಿದ್ದು,ಇದು ಕೇವಲ ಪಕ್ಷಕ್ಕಾಗಿ ಮಾಡುವ ಕೆಲಸವಲ್ಲ, ದೇಶಕ್ಕಾಗಿ, ರಾಷ್ಟ್ರದ ಹಿತಕ್ಕಾಗಿ ಮಾಡುವ ಸೇವೆಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರವಾರ ನಗರ ಮಂಡಲದ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಚುನಾವಣೆ ಮುಗಿಯಿತು, ಕೆಲಸವೂ ಮುಗಿಯಿತು ಎನ್ನುವ ಮನೋಭಾವ ಬಿಜೆಪಿಯ ಕಾರ್ಯಕರ್ತರಲ್ಲಿ ಇರಬಾರದು. ಕೆಲಸ ನಿರಂತರವಾಗಿ ಇರುತ್ತದೆ. ನಾವು ನಿಷ್ಠೆಯಿಂದ ಹಾಗೂ ಗಟ್ಟಿಯಾಗಿ ಕೆಲಸ ಮಾಡುವಾಗ ಅದನ್ನು ಯಾರೂ ಗಮನಿಸದಿದ್ದರೂ ದೇವರು ಖಂಡಿತ ಮೆಚ್ಚುತ್ತಾನೆ. ಧರ್ಮದ ಹಾದಿಯಲ್ಲಿ ಅಂದರೆ ಸತ್ಯದ ಮಾರ್ಗದಲ್ಲಿ ನಡೆದು, ಪ್ರಾಮಾಣಿಕತೆಯಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಷ್ಠಾವಂತ ಕಾರ್ಯಕರ್ತರ ಅವಿರತ ಪರಿಶ್ರಮದಿಂದಲೇ ಬಿಜೆಪಿ ಇಂದು ಇಷ್ಟೊಂದು ಸದೃಢವಾಗಿ ಬೆಳೆದಿದೆ. ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದರು.
ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವೆಲ್ಲರೂ ಸಂಘಟಿತರಾಗಿ ಮತ್ತಷ್ಟು ಶಕ್ತಿ ತುಂಬಬೇಕು. ಚುನಾವಣೆ ಇರಲಿ, ಇಲ್ಲದಿರಲಿ ಜನರ ನಡುವೆ ಇದ್ದು, ಪಕ್ಷದ ಸಿದ್ಧಾಂತ ಹಾಗೂ ರಾಷ್ಟ್ರದ ಹಿತದ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ, ಪ್ರಮುಖರಾದ ರಾಜು ಭಂಡಾರಿ, ಸುನೀಲ ಸೋನಿ ಕಿಶನ್ ಕಾಂಬಳೆ, ರವಿರಾಜ್ ರಂಗೋಲಿ ಕರ್, ಮನೋಜ್ ಭಟ್, ವಿ ಎಂ ಹೆಗಡೆ, ಮಂಡಲ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನು ಓದಿ//ಮೈತ್ರಿ ಧರ್ಮದ ನಡುವೆಯೇ ಜೆಡಿಎಸ್ನ ಮಾಸ್ಟರ್ ಪ್ಲ್ಯಾನ್! 10 ಕ್ಷೇತ್ರಗಳಲ್ಲಿ ಜೆಡಿಎಸ್ನಿಂದ ಹೊಸ ಆಟ

