ಸುದ್ದಿಬಿಂದು ಬ್ಯೂರೋ ವರದಿ
ಉತ್ತರ ಕನ್ನಡ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ, ರಸ್ತೆ ಅಪಘಾತ, ಗಾಂಜಾ ಸೇವನೆ, ಮಟ್ಕಾ ಜೂಜಾಟ, ಮನೆ ಕಳ್ಳತನ ಸೇರಿದಂತೆ ಅಸ್ವಾಭಾವಿಕ ಸಾವು ಪ್ರಕರಣಗಳು ವರದಿಯಾಗಿವೆ. ಭಟ್ಕಳ, ಸಿದ್ದಾಪುರ, ಅಂಕೋಲಾ ಹಾಗೂ ದಾಂಡೇಲಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಭಟ್ಕಳದಲ್ಲಿ ಬೈಕ್ ಕಳ್ಳತನ
ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಲಿಯ ಹಿರೇಹಿತ್ಲು ರಸ್ತೆಯ ಬಳಿ ನಿಲ್ಲಿಸಿದ್ದ ಸುಮಾರು 60 ಸಾವಿರ ರೂ. ಮೌಲ್ಯದ ಬಿಳಿ ಬಣ್ಣದ ಟಿವಿಎಸ್ ಅಪಾಚೆ ಆರ್‌ಟಿಆರ್ 180 ಮೋಟಾರ್ ಸೈಕಲ್ ಕಳ್ಳತನವಾಗಿದೆ. ಅಕ್ಟೋಬರ್ 26ರ ರಾತ್ರಿ 12.30ರಿಂದ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಬೈಕ್ ಕದ್ದೊಯ್ದಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಡಿಕ್ಕಿ: ವೃದ್ಧ ಸಾವು
ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಗುಳ್ಮೆ ಕ್ರಾಸ್‌ನ ತೂರ್ ಮಸೀದಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ 73 ವರ್ಷದ ಮಹ್ಮದ್ ಖಾಸೀಂ ಮೃತಪಟ್ಟಿದ್ದಾರೆ.ಅಕ್ಟೋಬರ್ 31ರ ರಾತ್ರಿ ಸುಮಾರು 8.30ರ ವೇಳೆಗೆ ಕುಂದಾಪುರ ಕಡೆಯಿಂದ ಭಟ್ಕಳದತ್ತ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬರುತ್ತಿದ್ದ ಲಾರಿ, ರಸ್ತೆ ದಾಟುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸ್ಕೂಟರ್ ಸವಾರನ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ವಿರುದ್ಧ ಭಟ್ಕಳ ಶಹರ ಪೊಲೀಸ್

ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರದಲ್ಲಿ ಇಬ್ಬರು ಗಾಂಜಾ ಸೇವನೆ ದೃಢ
ಸಿದ್ದಾಪುರ ಪಟ್ಟಣದ ನೆಹರು ಮೈದಾನದ ಸಮೀಪದ ಸರ್ಕಾರಿ ಆಸ್ಪತ್ರೆ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಶಿವಮೊಗ್ಗದ ವಿದ್ಯಾನಗರದ ಚಂದನಕುಮಾರ (24) ಹಾಗೂ ಚಂದ್ರಕಾಂತ (21) ಗಾಂಜಾ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕೋಲಾದಲ್ಲಿ ಮಟ್ಕಾ ಜೂಜಾಟ: ವ್ಯಕ್ತಿ ವಶಕ್ಕೆ
ಅಂಕೋಲಾ ಪಟ್ಟಣದ ಅಜ್ಜಿಕಟ್ಟಾ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ರಾಜು ಎಂಬಾತನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.