ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರಿನಲ್ಲಿ ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಮೂವರು ಮೀನುಗಾರರು ಮೃತಪಟ್ಟ ದುರಂತದ ನೆನಪು ಮಾಸುವ ಮುನ್ನವೇ ಇದೀಗ ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ಮತ್ತೊಂದು ಅಂತಹದ್ದೇ ದುರಂತ ಸಂಭವಿಸಿದೆ. ಮೀನುಗಾರಿಕಾ ಬೋಟ್‌ನಲ್ಲಿದ್ದ ಮೀನಿನ ಸ್ಟೋರೆಜ್‌ನಲ್ಲಿ ಉಸಿರುಗಟ್ಟಿ ಇಬ್ಬರು ಮೀನುಗಾರರು ಮೃತಪಟ್ಟಿರುವ ಘಟನೆ ನಡೆದಿದೆ.

ಮುದಗಾ ಬಂದರಿನಲ್ಲಿ ಲಂಗರು ಹಾಕಿದ್ದ ‘ಮೂಕಾಂಬಿಕಾ’ ಹೆಸರಿನ ಮೀನುಗಾರಿಕಾ ಬೋಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಮೀನುಗಾರರು ಒಡಿಶಾ ಮೂಲದವರು ಎಂದು ತಿಳಿದುಬಂದಿದೆ.
ಬೋಟ್‌ನಲ್ಲಿದ್ದ ‘ಚಮನ್’ ಎಂಬ ಮೀನಿನಿಂದ ಹೊರಬಂದ ತೀವ್ರ ವಾಸನೆಯಿಂದಾಗಿ ಮೀನಿನ ಸಂಗ್ರಹಣಾ ಕೊಠಡಿಯಲ್ಲಿ ಉಸಿರುಗಟ್ಟಿ ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೀನುಗಳನ್ನು ಬೋಟ್‌ನಿಂದ ಖಾಲಿ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.‌ಕೇವಲ ಮೂರು ದಿನಗಳ ಹಿಂದಷ್ಟೇ ತದಡಿ ಬಂದರಿನಲ್ಲಿ ಮೀನು ಸಂಗ್ರಹಣಾ ಪ್ರದೇಶದಲ್ಲಿ ಉಂಟಾದ ವಿಷಕಾರಿ ವಾಸನೆಯಿಂದ ಮೂವರು ಮೀನುಗಾರರು ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ಮುದಗಾ ಬಂದರಿನಲ್ಲಿ ಮತ್ತಿಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರವಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ/ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ