ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಮೀನು ಸಂಗ್ರಹಿಸುವ ಸ್ಥಳದಲ್ಲಿ ಉಂಟಾದ ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಮೂವರು ಮೀನುಗಾರರು ಮೃತಪಟ್ಟಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ನಡೆದಿದೆ.

ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಮೃತರು ಎಂದು ಗುರುತಿಸಲಾಗಿದೆ. ತದಡಿಯ ಕುಚೈಮಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಮೀನುಗಾರಿಕೆಗೆ ತೆರಳಿ, ಮೀನು ಬೇಟೆಯಾಡಿ ಬಂದರಿಗೆ ವಾಪಸ್ಸಾಗಿದ್ದರು.

ಬಂದರಿಗೆ ಬಂದ ಬಳಿಕ ಮೀನುಗಳನ್ನು ಸಂಗ್ರಹಿಸುವ ಸ್ಥಳಕ್ಕೆ ಇಳಿದು, ಮೀನುಗಳನ್ನು ಖಾಲಿ ಮಾಡಿದ್ದರು. ಬಳಿಕ ಮೀನು ಇಟ್ಟಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ವೇಳೆ ಅಲ್ಲಿಂದ ಹೊರಬಂದ ವಿಷಕಾರಿ ವಾಸನೆ ಹಾಗೂ ಅನಿಲದಿಂದ ಉಸಿರುಗಟ್ಟಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಇನ್ನಿಬ್ಬರು ಮೀನುಗಾರರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೀನು ಸಂಗ್ರಹಿಸುವ ಸ್ಥಳದಲ್ಲಿ ಯಾವ ರೀತಿಯ ವಿಷಕಾರಿ ಅನಿಲ ಅಥವಾ ವಾಸನೆ ಉಂಟಾಗಿತ್ತು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.