ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ : ಕತಗಾಲ ಅರಣ್ಯ ವಲಯದ ಎಡ್ತಾರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ಹುಲಿಯೊಂದು ದನದ ಕೊಟ್ಟಿಗೆಗೆ ನುಗ್ಗಿ ಆಕಳ ಕರುವಿನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯಿಂದ ಕರು ತೀವ್ರವಾಗಿ ಗಾಯಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸುವಂತೆ ಮಾಡಿದೆ.

ಎಡ್ತಾರೆ ಗ್ರಾಮದ ಸಾವಿತ್ರಿ ಮಂಜುನಾಥ ಪಟಗಾರ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಕೊಟ್ಟಿಗೆಗೆ ನುಗ್ಗಿದ ಹುಲಿ, ಅಲ್ಲಿದ್ದ ಆಕಳ ಕರುವಿನ ಮೇಲೆ ದಾಳಿ ನಡೆಸಿದೆ. ಹುಲಿಯ ದಾಳಿಯಿಂದ ಕರು ತೀವ್ರವಾಗಿ ಗಾಯಗೊಂಡಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಶು ವೈದ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದಲ್ಲಿ ಹುಲಿ ದಾಳಿಯ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಹುಲಿಯ ಚಲನವಲನದ ಕುರಿತು ನಿಗಾ ವಹಿಸಿ, ಜನರು ಹಾಗೂ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಹುಲಿಯನ್ನು ಶೀಘ್ರವಾಗಿ ಸೆರೆಹಿಡಿದು ಮುಂದಿನ ಅನಾಹುತಗಳನ್ನು ತಪ್ಪಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.