ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಆಡುಕಳದ 2 ವರ್ಷ 10 ತಿಂಗಳ ಪುಟ್ಟ ಬಾಲಕಿ ಸ್ವರಶ್ರೀ ತಬಲಾವಾದನದಲ್ಲಿ ಅತ್ಯಂತ ಕಿರಿಯ ತಬಲಾಕಲಾವಿದೆಯಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿದ್ದಾಳೆ.
12 ತಾಳಗಳನ್ನು ಅವುಗಳ ಬೋಲ್ ಹೇಳುತ್ತ ತಪ್ಪಿಲ್ಲದೇ ತಬಲಾ ನುಡಿಸುವ ಸ್ವರಶ್ರೀ ನೋಡುಗರನ್ನು ವಿಸ್ಮಯಗೊಳಿಸುತ್ತಾಳೆ. ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರ ಶಿಷ್ಯ ಖ್ಯಾತ ತಬಲಾವಾದಕ ಗುರುರಾಜ ಹೆಗಡೆ ಆಡುಕಳ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ ಹಿಂದೂಸ್ಥಾನಿ ಗಾಯಕಿ ಶ್ರೀಲತಾ ಇವರ ಪುತ್ರಿಯಾದ ಸ್ವರಶ್ರೀ ಈ ಸಾಧನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಒಂದು ವರ್ಷ ಕಳೆದಾಗಲೇ ತಬಲಾ ಮೇಲೆ ಕೈಯಾಡಿಸುತ್ತ ಅದರ ಮೇಲೆ ನಿದ್ರಿಸುತ್ತಿದ್ದ ಪುಟಾಣಿಯ ತಬಲಾ ಆಸಕ್ತಿ ಕಂಡು ಹೆತ್ತವರು ಅವಳಿಗಾಗಿ ಎರಡು ಪುಟ್ಟ ತಬಲಾ ಮಾಡಿಸಿಕೊಟ್ಟಿದ್ದಾರೆ. ಗುರುರಾಜ ತನ್ನ ಶಿಷ್ಯರಿಗೆ ತಬಲಾ ಪಾಠ ಹೇಳುವಾಗೆಲ್ಲ ಜೊತೆಗೆ ಕೂರುತಿದ್ದ ಮಗಳ ಆಸಕ್ತಿ ಕಂಡು 12 ತಾಳಗಳನ್ನು ಬೋಲ್ ಸಹಿತ ಕಲಿಸಿದ್ದಾರೆ. ಈ ಪುಟಾಣಿಯ ಸಾಧನೆ ಬೆರಗುಗೊಳಿಸಿದ್ದು, ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

