
ಸುದ್ದಿಬಿಂದು ಬ್ಯೂರೋ ವರದಿ
ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿ ಒಟ್ಟು ಶೇ. 75.62 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ.ಎಮ್.ಜಾನಕಿ ಅವರು ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ನಿಗದಿಯಂತೆ ನಾಲ್ಕು ಜಿಲ್ಲೆಯ 137 ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭವಾಯಿತು. ಬೆಳಿಗ್ಗೆ 8ಗಂಟೆಯಿಂದ 12 ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ.27.17, ಹಾವೇರಿ ಜಿಲ್ಲೆಯಲ್ಲಿ ಶೇ.28.37, ಗದಗ ಜಿಲ್ಲೆಯಲ್ಲಿ ಶೇ.25.27 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.29.65 ಸೇರಿ ಒಟ್ಟು ಶೇ.27.46 ಮತದಾನವಾಗಿದೆ. ಮಧ್ಯಾಹ್ನ 02 ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ.47.71, ಹಾವೇರಿ ಜಿಲ್ಲೆಯಲ್ಲಿ ಶೇ.53.06, ಗದಗ ಜಿಲ್ಲೆಯಲ್ಲಿ ಶೇ.46.18 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.52.09 ಸೇರಿ ಒಟ್ಟು ಶೇ.49.45 ಮತದಾನವಾಗಿದೆ. ಮತ್ತು ಸಂಜೆ 04 ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ.69.16, ಹಾವೇರಿ ಜಿಲ್ಲೆಯಲ್ಲಿ ಶೇ.75.78, ಗದಗ ಜಿಲ್ಲೆಯಲ್ಲಿ ಶೇ.74.29 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.74.68 ಸೇರಿ ಒಟ್ಟು ಶೇ.72.88 ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತರಾದ 35,119 ಮತದಾರರ ಪೈಕಿ ಪುರುಷ 14,982, ಮಹಿಳೆ 10,232 ಸೇರಿದಂತೆ ಒಟ್ಟು ಪದವೀಧರ ಮತದಾರರು 25,214 ಜನರು ಮತ ಚಲಾಯಿಸಿದ್ದಾರೆ. ಒಟ್ಟು ಧಾರವಾಡ ಜಿಲ್ಲೆಯಲ್ಲಿ ಶೇ.71.80 ರಷ್ಟು ಮತದಾನವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ನೋಂದಾಯಿತರಾದ 24,648 ಮತದಾರರ ಪೈಕಿ ಪುರುಷ 12,748, ಮಹಿಳೆ 6,653 ಸೇರಿದಂತೆ ಒಟ್ಟು ಪದವೀಧರ ಮತದಾರರು 19,401 ಜನರು ಮತ ಚಲಾಯಿಸಿದ್ದಾರೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ ಶೇ.78.71 ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲಿ ನೋಂದಾಯಿತರಾದ 21,594 ಮತದಾರರ ಪೈಕಿ ಪುರುಷ 11,028, ಮಹಿಳೆ 5,742 ಸೇರಿದಂತೆ ಒಟ್ಟು ಪದವೀಧರ ಮತದಾರರು 16,770 ಜನರು ಮತ ಚಲಾಯಿಸಿದ್ದಾರೆ. ಒಟ್ಟು ಗದಗ ಜಿಲ್ಲೆಯಲ್ಲಿ ಶೇ.77.66 ರಷ್ಟು ಮತದಾನವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೋಂದಾಯಿತರಾದ 16,039 ಮತದಾರರ ಪೈಕಿ ಪುರುಷ 6,352, ಮಹಿಳೆ 5,921 ಸೇರಿದಂತೆ ಒಟ್ಟು ಪದವೀಧರ ಮತದಾರರು 12,273 ಜನರು ಮತ ಚಲಾಯಿಸಿದ್ದಾರೆ. ಒಟ್ಟು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.76.52 ರಷ್ಟು ಮತದಾನವಾಗಿದೆ. ಹಾಗೂ ಮತಕ್ಷೇತ್ರ ವ್ಯಾಪ್ತಿಯ 4 ಜಿಲ್ಲೆಗಳು ಸೇರಿದಂತೆ ಒಟ್ಟು 97,400 ನೋಂದಾಯಿತ ಮತದಾರರಿದ್ದು, ಈ ಪೈಕಿ 45,110 ಪುರುಷ ಹಾಗೂ 28,548 ಮಹಿಳಾ ಮತದಾರರು ಸೇರಿದಂತೆ ಒಟ್ಟು 73,658 ಮತದಾರರು ಇಂದಿನ ಮತದಾನದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಒಟ್ಟು ಶೇ.75.62 ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳು ಮತ್ತು ಅಭ್ಯರ್ಥಿಗಳ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗಿದೆ. ಮತಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಾಂತಿಯುತವಾಗಿ ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ/ಸಿದ್ದರಾಮಯ್ಯ ವಿಡಿಯೋ ವಿವಾದ: ಕೃಪಾ ಆಳ್ವಗೆ ಶೋಕಾಸ್ ನೋಟಿಸ್

