ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಜಮೀನು ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದ ಮೇಣಸಿನಕೇರಿಯಲ್ಲಿ ವಾಸವಾಗಿದ್ದ ಮಾರುತಿ ಬೀರಾ ಹೆಗಡೆ ಅವರನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಾರುತಿ ಹೆಗಡೆ ಅವರ ಪತ್ನಿಯ ತವರು ಮನೆಯ ಭೂಮಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಈ ನಡುವೆ ಅವರ ಭಾವ ಅನಂತ ಈಶ್ವರ ಹೆಗಡೆ ಅವರು ಸುಮಾರು ಒಂದು ಎಕರೆ ಜಮೀನನ್ನು ಮೇಲಿನ ಕೂಜಳ್ಳಿಯ ನಾಗಪ್ಪ ಜಟ್ಟು ಗೌಡ ಅವರಿಗೆ ಮಾರಾಟ ಮಾಡಿದ್ದರು. ಈ ವ್ಯವಹಾರವನ್ನು ಒಪ್ಪದ ಮಾರುತಿ ಹೆಗಡೆ ಅವರು ಜಮೀನಿನ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಜಮೀನು ಖರೀದಿಸಿದ ಬಳಿಕ ಕೋರ್ಟ್ ಕೇಸು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾದುದರಿಂದ ನಾಗಪ್ಪ ಗೌಡ ಅವರಿಗೆ ಮಾರುತಿ ಹೆಗಡೆ ಮೇಲಿನ ಅಸಮಾಧಾನ ಹೆಚ್ಚಾಗಿತ್ತು. ಇದೇ ದ್ವೇಷವೇ ನಂತರ ಗಂಭೀರ ಹಂತಕ್ಕೆ ತಲುಪಿ ಹಲ್ಲೆಗೆ ಕಾರಣವಾಗಿದೆ.

ಜನವರಿ 17ರ ಸಂಜೆ ಮಾರುತಿ ಹೆಗಡೆ ಅವರು ತಮ್ಮ ಮನೆ ಮುಂದೆ ನಿಂತಿದ್ದ ವೇಳೆ ಅಲ್ಲಿಗೆ ಬಂದ ನಾಗಪ್ಪ ಗೌಡ ಅವರು ಕೇಸು ವಿಚಾರವಾಗಿ ಜಗಳ ಆರಂಭಿಸಿದ್ದಾರೆ. ಮಾತಿನ ಚಕಮಕಿ ಗಲಾಟೆಗೆ ತಿರುಗಿ, ನಾಗಪ್ಪ ಗೌಡ ಅವರು ಮಾರುತಿ ಹೆಗಡೆ ಅವರಿಗೆ ಹೊಟ್ಟೆಗೆ ಒದ್ದು, ಕೈಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಮಾರುತಿ ಹೆಗಡೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಂದೆಯ ಸಾವಿನ ಕುರಿತು ಮೃತರ ಪುತ್ರಿ ಚೇತನಾ ಹೆಗಡೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯಾದ ನಾಗಪ್ಪ ಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ/ನಿವೃತ್ತ ಶಿಕ್ಷಕ ಕಡತೋಕಾದ ಶಂಕರ ನಾಯ್ಕ ವಿಧಿವಶ