ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ರಾಜ್ಯದಲ್ಲಿಯೇ ಅತಿ ದೊಡ್ಡ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ಇನ್ನೂ ಜಾತ್ರಾ ಅನುದಾನ ಮಂಜೂರಿಯಾಗಿಲ್ಲ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಫೆ  3ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಶೌಚಾಲಯ, ಸ್ನಾನಗೃಹ, ಕುಡಿಯುವ ನೀರು, ರಾತ್ರಿ ತಂಗುವ ವ್ಯವಸ್ಥೆ, ಬೆಳಿಗ್ಗೆ ತಿಂಡಿ ವ್ಯವಸ್ಥೆ ಸೇರಿದಂತೆ ಕನಿಷ್ಠ 10ಸಾವಿರ ಜನರಿಗೆ ಕುಂಭಮೇಳ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೇವಲ ರಸ್ತೆ ನಿರ್ಮಾಣವಲ್ಲ, ಭಕ್ತರ ಭದ್ರತೆ ಹಾಗೂ ಸೌಲಭ್ಯಗಳೇ ಮುಖ್ಯ ಎಂದು ಅವರು ತಿಳಿಸಿದರು.

ಶಿರಸಿಯ ಎಲ್ಲಾ ಕಲ್ಯಾಣ ಮಂಟಪಗಳನ್ನು ಸರ್ಕಾರವೇ ಬಾಡಿಗೆಗೆ ಪಡೆದು ಧರ್ಮಛತ್ರಗಳಾಗಿ ಪರಿವರ್ತಿಸಬೇಕು.ಬೆಳಿಗ್ಗೆ ಸ್ನಾನಕ್ಕಾಗಿ ಕೋಟೆಕೆರೆಗೆ ತೆರಳುವ ಭಕ್ತರಿಗೆ ಅಪಾಯ ಎದುರಾಗುವ ಸಾಧ್ಯತೆ ಇದ್ದು, ಯಾವುದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಎತ್ತಿದರು.ಮಾರಿಕಾಂಬಾ ಗದ್ದುಗೆ ಸಮೀಪದ ಶೌಚಾಲಯಗಳ ಸ್ವಚ್ಛತೆಗೂ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರು.

ಇತ್ತಿಚೆಗೆ ಸಿದ್ದಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಭೀಮಣ್ಣ ನಾಯ್ಕ , ಸಚಿವ ಮಂಕಾಳ ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದ ಅವರು, ಕರಾವಳಿ ಉತ್ಸವಕ್ಕೆ ಹಣ ನೀಡುವ ಸರ್ಕಾರ ಶಿರಸಿ ಜಾತ್ರೆಗೆ ಭಕ್ತರ ಮೂಲಭೂತ ಸೌಕರ್ಯಕ್ಕೆ ಹಣ ನೀಡದೆ ತಾರತಮ್ಯ ಮಾಡುತ್ತಿದೆ ಎಂದು ಕಿಡಿಕಾರಿದರು. ಜಾತ್ರಾ ಅನುದಾನ ಮಂಜೂರು ಮಾಡಿಸಿ ಜನರ ಸ್ವಾಭಿಮಾನ ಎತ್ತಿ ಹಿಡಿಯುವ ಜವಾಬ್ದಾರಿ ಶಾಸಕರ ಮೇಲಿದೆ ಎಂದು ಹೇಳಿದರು.

ನಗರಸಭೆ ಆಡಳಿತವೂ ಇಲ್ಲದಿರುವ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯ ಸಂಪೂರ್ಣ ಜವಾಬ್ದಾರಿ ಶಾಸಕರ ಮೇಲಿದೆ. ಪ್ರತಿ ದಿನ ಒಂದರಿಂದ ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ದಿನಕ್ಕೆ 50ಸಾವಿರಕ್ಕೂ ಹೆಚ್ಚು ಹೊರ ಜಿಲ್ಲೆಯ ಭಕ್ತರು ಶಿರಸಿಯಲ್ಲಿ ತಂಗುತ್ತಾರೆ. ಜಾತ್ರಾ ಅನುದಾನ ಮಂಜೂರಾದರೆ ಅವ್ಯವಸ್ಥೆಗಳನ್ನು ಸರಿಪಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

<span;>ಸಮನ್ವಯತೆಗೆ ಆಗ್ರಹ
ನಗರಸಭೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ನಡುವೆ ಉಂಟಾಗುವ ಗೊಂದಲ ತಪ್ಪಿಸಲು ಮುಂಚಿತವಾಗಿ ಸಭೆ ನಡೆಸಬೇಕು. ಜಾತ್ರಾ ಚಪ್ಪರದ ಸಮೀಪ ಅಂಗಡಿ-ವ್ಯಾಪಾರಕ್ಕೆ ಅವಕಾಶ ನೀಡಬಾರದು. ವಿಐಪಿ ಹಾಗೂ ಸಾಮಾನ್ಯ ದರ್ಶನಕ್ಕೆ ಪ್ರತ್ಯೇಕ ಪ್ರವೇಶ ದ್ವಾರ ಕಲ್ಪಿಸಬೇಕು. ಪ್ರತಿ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ದೇವಸ್ಥಾನದ ವತಿಯಿಂದಲೇ ಪಾನೀಯ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಭಕ್ತರಿಗೆ ರಾತ್ರಿ ತಂಗಲು ಸೂಕ್ತ ಟೆಂಟ್ ವ್ಯವಸ್ಥೆ, ಶೌಚಾಲಯ, ಪ್ರಸಾದ ವಿತರಣಾ ಕೇಂದ್ರ, ಮೊಬೈಲ್ ಟಾಯ್ಲೆಟ್‌ಗಳ ಅಳವಡಿಕೆ, ಕುಡಿಯುವ ನೀರು, ತುರ್ತು ಚಿಕಿತ್ಸಾ ಘಟಕಗಳ ಸ್ಥಾಪನೆ ಸೇರಿದಂತೆ ಹಲವು ಸಲಹೆಗಳನ್ನು ನೀಡಿದ ಅವರು, ರಥೋತ್ಸವ ನಡೆಯುವ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಹಾಗೂ ಭೂಗತ ಕೇಬಲ್ ಅಳವಡಿಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ವ್ಯವಸ್ಥೆಗಳನ್ನು ಜಾರಿಗೆ ತರದಿದ್ದಲ್ಲಿ ತಾಯಿ ಮಾರಿಕಾಂಬೆಯ ಭಕ್ತರ ಹಿತದೃಷ್ಟಿಯಿಂದ ಫೆಬ್ರವರಿ 3ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ /ಕುಮಟಾದಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ಅಪಘಾತ: ಐವರು ಗಾಯ