ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಬಹುಕೋಟಿ ವೆಚ್ಚದ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯ ಮೂಲಕ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಗ್ರಾಮೀಣ ಜನರಲ್ಲಿ ಆರಂಭದಲ್ಲಿ ಸಂತಸ ಮೂಡಿಸಿತ್ತು. ಆದರೆ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಇನ್ನೂ ಕೂಡ ನಲ್ಲಿಗಳಲ್ಲಿ ನೀರಿನ ಹನಿಯೂ ಕಾಣದಿರುವುದು ದುರಂತವಾಗಿದೆ. ಈ ನಲ್ಲಿಯಲ್ಲಿ ನೀರು ಬರಲು ಇನ್ನೆಷ್ಟು ಜನ್ಮ ಬೇಕು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಮುಖ್ಯವಾಗಿ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದಿವೆ. ಆದರೆ ಆಗೊಮ್ಮೆ ಈಗೊಮ್ಮೆ ತಪಾಸಣೆ ನೆಪದಲ್ಲಿ ನೀರು ಬಿಡಿಸಿ ಜನರನ್ನು ಮರುಳು ಮಾಡುತ್ತಿರುವುದನ್ನು ಹೊರತುಪಡಿಸಿ ನಿರಂತರ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಮನೆ ಬಾಗಿಲಿಗೆ ನೀರು ಬರುತ್ತದೆ ಎಂಬ ನಂಬಿಕೆಯಲ್ಲಿ ಗ್ರಾಮಸ್ಥರು ತಮ್ಮ ಮನೆ ಅಂಗಳದಲ್ಲಿ ಪೈಪ್‌ಲೈನ್ ಹಾಕಲು ಆಳವಾದ ಗುಂಡಿ ತೋಡಿಸಿಕೊಂಡರು. ಯಾರೂ ತಕರಾರು ಎತ್ತಿಲ್ಲ. ಆದರೆ ಜನ ಅಂದುಕೊಂಡಂತೆ ಯಾವುದೇ ಫಲಿತಾಂಶ ಸಿಗುತ್ತಿಲ್ಲ.
ನಿರಂತರ ನೀರು ಬಿಡುವ ಮುನ್ನವೇ ಬಹುತೇಕ ಕಡೆ ಪೈಪ್ ದುರಸ್ತಿ ಕಾರ್ಯಗಳು ಮುಗಿಯುವ ಲಕ್ಷಣವೇ ಕಾಣಿಸುತ್ತಿಲ್ಲ. ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ಮಳೆಗಾಲ ಸೇರಿದಂತೆ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ಸ್ಥಳೀಯರು ತಂದಿದ್ದಾರೆ. ಆದರೆ ಯಾರು ಕೂಡ ಇದಕ್ಕೆ ಸ್ಪಂದಿಸುತ್ತಿಲ್ಲ. ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ಗುತ್ತಿಗೆದಾರರನ್ನು ವಿಚಾರಿಸುವುದಾಗಿ ಹೇಳುತ್ತಾರೆ. ಆದರೆ ನೀರು ಬಿಡುವ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಜನಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲವೇ?
ಈ ಭಾಗದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡರೂ ನೀರು ಬಿಡದಿರುವ ಕುರಿತು ಸ್ಥಳೀಯರು ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದಾರೆ. ಜನರ ಸಮಸ್ಯೆ ಆಲಿಸಿದ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕಾಮಗಾರಿ ಪೂರ್ಣಗೊಂಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು “ಎಲ್ಲವೂ ಸರಿಯಾಗಿದೆ, ಯಾವುದೇ ಸಮಸ್ಯೆ ಇಲ್ಲ” ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಎಲ್ಲವೂ ಸರಿಯಾಗಿದ್ದರೆ ನಲ್ಲಿಗಳಲ್ಲಿ ಮಾತ್ರ ನಿರಂತರವಾಗಿ ನೀರು ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.
ಇದನ್ನೂ ಓದಿ/ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ




