ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲ್ಲೂಕಿನ ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಸಮೀಪ ತಡರಾತ್ರಿ ಭೀಕರ ಘಟನೆ ನಡೆದಿದೆ. ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ.

ಘಟನೆಯಲ್ಲಿ ಕಾರು ಹಾಗೂ ಅದರೊಳಗಿನ ಇಬ್ಬರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಸಾಧ್ಯವಾಗದ ಸ್ಥಿತಿಯಲ್ಲಿದೆ. ಸಜೀವ ದಹನವಾಗಿರುವವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು ಎನ್ನಲಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಕಂದಕಕ್ಕೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಡಿಕ್ಕಿಯ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.
ಬೆಂಕಿಯ ತೀವ್ರತೆಗೆ ಕಾರಿನ ನಂಬರ್ ಪ್ಲೇಟ್ ಕೂಡ ಸಂಪೂರ್ಣವಾಗಿ ಸುಟ್ಟು ಕಾಣೆಯಾಗಿದ್ದು, ವಾಹನದ ನೋಂದಣಿ ವಿವರ ಪತ್ತೆ ಕಷ್ಟವಾಗುತ್ತಿದೆ. ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಕಾರು ಹಾಗೂ ಮೃತಪಟ್ಟವರ ಗುರುತು ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.
ಘಟನೆಯ ನಿಖರ ಕಾರಣ ಹಾಗೂ ಹಿನ್ನೆಲೆ ತನಿಖೆಯ ಬಳಿಕವೇ ತಿಳಿಯಲಿದೆ.


