ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಹುಬ್ಬಳ್ಳಿಯಿಂದ ಕುಮಟಾಕ್ಕೆ ಬಂದ ಮಹಿಳೆ ಪಾರ್ಸಲ್ ಇಳಿಸುವ ಗಡಿಬಿಡಿಯಲ್ಲಿ ಕೈಯಲ್ಲಿದ್ದ 40 ಗ್ರಾಂ ಬಂಗಾರವಿದ್ದ ಬ್ಯಾಗ್ ಬಿಟ್ಟು ಹೋಗಿದ್ದು, ಅದನ್ನ ಒಂದು ಗಂಟೆಯೊಳೆ ಇಲ್ಲಿನ ಮಹಿಳಾ ಪಿಎಸ್ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಕಿರಣ್ ಎಚ್ ನಾಯ್ಕ ಪತ್ತೆ ಹಚ್ಚಿ ಮಹಿಳೆಗೆ ಹಿಂದಿರುಗಿಸಿರುವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಲೂಕಿನ ವಾಲಗಳ್ಳಿಯ ನಿವಾಸಿ ಬೇಬಿ ಅಣ್ಣಪ್ಪ ವರ್ಣೇಕರ್ (50) ಅವರು ಮಧ್ಯಾಹ್ನ ಸುಮಾರು 3 ಗಂಟೆಗೆ ಸುಮಾರಿಗೆ ಹುಬ್ಬಳ್ಳಿಯಿಂದ ಬಂದು ಬಸ್ ಇಳಿದಿದ್ದು, ಬಸ್‌ನಲ್ಲಿದ್ದ ಪಾರ್ಸಲ್‌ಗಳನ್ನ ಆಟೋದಲ್ಲಿ ತುಂಬಿಕೊಂಡಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಇದ್ದ ಬ್ಯಾಗ್‌ನ್ನ ಅಲ್ಲೇ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೈಕ್‌‌ ಮೇಲೆ ಇಟ್ಟಿದ್ದರು. ಎಲ್ಲಾ ಪಾರ್ಸಲ್‌ಗಳನ್ನ ಆಟೋದಲ್ಲಿ‌ ತುಂಬಿಕೊಂಡು ಅವರು ಬೈಕ್ ಮೇಲೆ ಇಟ್ಟಿರುವ ಬ್ಯಾಗ್ ತೆಗೆದುಕೊಳ್ಳುವುದನ್ನ ಮರೆತು ಲಗೇಜ್ ತುಂಬಿಕೊಂಡ ಆಟೋದಲ್ಲೇ ಮನೆಗೆ ತೆರಳಿದ್ದಾರೆ.

ಮನೆಗೆ ತಲುಪಿದ ಬಳಿಕ ಬ್ಯಾಗ್ ಇಲ್ಲದಿರುವುದನ್ನು ಗಮನಿಸಿದ ಅವರು ತಕ್ಷಣ ಬಸ್ ನಿಲ್ದಾಣಕ್ಕೆ ಬಂದು ಹುಡುಕಾಟ ನಡೆಸಿದ್ದಾರೆ. ಅಷ್ಟರೊಳಗೆ ಬೈಕ್ ಸವಾರ ತನ್ನ ಬೈಕ್‌ಕನ್ನ ತೆಗೆದುಕೊಂಡು ಹೋಗಿದ್ದು, ಆತನೂ ಸಹ ಅರ್ಧಕ್ಕೆ ಪ್ರಯಾಣಿಸಿದ ಮೇಲೆ ಯಾವುದೋ ಒಂದು ಬ್ಯಾಗ್ ಬೈಕ್‌ನಲ್ಲಿರುವುದನ್ನ ಗಮನಿಸಿ ವಾಪಸ್ ಬಸ್‌ನಿಲ್ದಾಣಕ್ಕೆ ಬಂದು ಆ ಬ್ಯಾಗ್ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ..

ಈ ನಡುವೆ ಮಹಿಳೆ ಎಲ್ಲಾ ಕಡೆ ಬ್ಯಾಗ್ ಹುಡುಕಾಟ ನಡೆಸಿದ್ದು, ಎಲ್ಲಿಯೂ ಸಿಗದೆ ಹೋದಾಗ ಕುಮಟಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ತಕ್ಷಣ ಕುಮಟಾ ವೃತ್ತ ನಿರೀಕ್ಷಕ ಯೋಗೇಶ್ ಕೆ.ಎಂ ಅವರು ಸಿಬ್ಬಂದಿಗೆ ಅಗತ್ಯ ನಿರ್ದೇಶನ ನೀಡಿದ್ದು, ಠಾಣೆಯ ಪಿಎಸೈ ಸಾವಿತ್ರಿ ನಾಯಕ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಿರಣ ನಾಯ್ಕ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ, ಆಗ ಬೈಕ್ ಸವಾರ ಬ್ಯಾಗ್ ಒಂದನ್ನ ವಾಪಸ್ ತಂದು ಕೊಟ್ಟುಹೋಗಿರುವುದು ಗೊತ್ತಾಗಿದೆ.
ಪತ್ತೆ ಹಚ್ಚಿದ ಬ್ಯಾಗ್‌ನಲ್ಲಿ ಇದ್ದ 40 ಗ್ರಾಂ ಚಿನ್ನಾಭರಣ ಹಾಗೂ ನಗದು ಸಹಿತವಾಗಿ ಬೇಬಿ ವರ್ಣೇಕರ್ ಅವರಿಗೆ ಹಸ್ತಾಂತರಿಸಲಾಗಿದೆ.

ಕುಮಟಾ ಪೊಲೀಸರ ಕಾರ್ಯಾಚರಣೆ ಹಾಗೂ ಪ್ರಾಮಾಣಿಕ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.