ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ : ಬೆಳಗಾವಿ ಮೂಲದ ಪ್ರವಾಸಿಗನೋರ್ವ ಮುರುಡೇಶ್ವರ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಭಾರೀ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ವೇಳೆ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಹೋಗುತ್ತಿರುವುದನ್ನ ಗಮನಿಸಿದ ಓಸಿಯನ್ ಅಡ್ವೆಂಚರ್ ಮುರುಡೇಶ್ವರದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಸಾಹಸಮಯ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಲೈಫ್‌ಗಾರ್ಡ್‌ಗಳಾದ ವೀಘನೇಶ್ವರ ಹರಿಕಾಂತ ಹಾಗೂ ರಾಜೇಶ್ ಅವರು ವಾಟರ್ ಬೈಕ್ ಮೂಲಕ ಸಮುದ್ರದೊಳಗೆ ತೆರಳಿ, ಅಲೆಯ ಮಧ್ಯೆ ಸಿಲುಕಿದ್ದ ಪ್ರವಾಸಿಗನನ್ನು ಸುರಕ್ಷಿತವಾಗಿ ರಕ್ಷಿಸಿ ಕರಾವಳಿಗೆ ಕರೆತಂದಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವೇಳೆ ಪ್ರವಾಸಿಗನು ಆತಂಕಗೊಂಡಿದ್ದರೂ, ಲೈಫ್‌ಗಾರ್ಡ್‌ಗಳ ಸಮಯೋಚಿತ ಸ್ಪಂದನೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ರಕ್ಷಿಸಲ್ಪಟ್ಟ ಪ್ರವಾಸಿಗನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆತ ಆರೋಗ್ಯವಾಗಿದ್ದಾನೆ. ಈ ಘಟನೆಯಿಂದ ಸ್ಥಳದಲ್ಲಿದ್ದ ಪ್ರವಾಸಿಗರು ಹಾಗೂ ಸಾರ್ವಜನಿಕರು ಆತಂಕಗೊಂಡರೂ, ಓಸಿಯನ್ ಅಡ್ವೆಂಚರ್ ಸಿಬ್ಬಂದಿ ಮತ್ತು ಲೈಫ್‌ಗಾರ್ಡ್‌ಗಳ ಧೈರ್ಯ ಮತ್ತು ಕಾರ್ಯಕ್ಷಮತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮುರುಡೇಶ್ವರ ಸಮುದ್ರ ತೀರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಹಾಗೂ ಲೈಫ್‌ಗಾರ್ಡ್‌ಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಇದನ್ನೂ ಓದಿ/Bhatkal/ಭಟ್ಕಳದಲ್ಲಿ ಪೊಲೀಸರ ಭರ್ಜರಿ ದಾಳಿ: 1.38 ಲಕ್ಷ ಮೌಲ್ಯದ ನಿಷೇಧಿತ ಇ-ಸಿಗರೇಟ್ ವಶ : ಆರೋಪಿ ಬಂಧನ




